ನ್ಯೂಸ್ ನಾಟೌಟ್ : ಬೆಂಗಳೂರಿನ ಕೃಷ್ಣಾರೆಡ್ಡಿ ಲೇಔಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಮೃತಪಟ್ಟಿದೆ. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಕಡೆ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅರಣ್ಯ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಆಗೋದು ಬಹುತೇಕ ಅಸಾಧ್ಯ. ಯಾಕೆಂದರೆ 1972ರ ವೈಲ್ಡ್ ಲೈಫ್ ಆಕ್ಟ್ ಪ್ರಕಾರ ಕೆಲವೊಂದು ರಿಯಾಯಿತಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗಿದೆ ಎನ್ನಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ವನ್ಯಜೀವಿಗಳ ಉಳಿವಿಗಾಗಿ ಸರ್ಕಾರ ರೂಪಿಸಿರುವ ವಿಶೇಷ ಕಾನೂನು. ಇದರನ್ವಯ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಮಹಾ ಅಪರಾಧ. ಆದರೆ ಕೆಲವು ವಿಶೇಷ ಸಂದರ್ಭದಲ್ಲಿ ಬೇಟೆಗೆ ಅಥವಾ ಗಾಯಗೊಳಿಸಲು ಅವಕಾಶವನ್ನು ಕೊಡಲಾಗಿದೆ. ಉದಾಹರಣೆಗೆ ತನ್ನ ಮೇಲೆ ಅಟ್ಯಾಕ್ ಮಾಡಿತು ಅಂದಾಗ, ತನ್ನ ಪ್ರಾಣವೇ ಹೋಗುತ್ತಿದೆ, ತನ್ನ ಉಳಿವಿಗೆ ಬೇರೆ ದಾರಿ ಇಲ್ಲ ಅಂದಾಗಲೂ ಪ್ರತಿದಾಳಿ ಮಾಡಬಹುದಾಗಿದೆ.
ಇಲಾಖೆ ಅಧಿಕಾರಿಗಳ ಪ್ರಕಾರ ಕಾಮನ್ ಮ್ಯಾನ್ ಏನಾದರೂ ತನ್ನ ಸ್ವರಕ್ಷಣೆಗಾಗಿ ಈ ತರಹ ಪ್ರತಿದಾಳಿ ನಡೆಸಿದ್ದಾರೆ ಎಂದಾದಾಗ ಆತನನ್ನು ಫಾರೆಸ್ಟ್ ಅಧಿಕಾರಿಗಳು ಬಂಧನಕ್ಕೆ ಒಳಪಡಿಸುತ್ತಾರೆ. ಮುಂದೆ ಕೋರ್ಟ್ ನಲ್ಲಿ ಆತ್ಮರಕ್ಷಣೆಗಾಗಿ ಎಂದು ಆತ ಹೇಳಿದಲ್ಲಿ ಅದನ್ನು ಪ್ರೂವ್ ಮಾಡಲು ಸಾಧ್ಯವಾದಲ್ಲಿ ಆತನಿಗೆ ಇದರಿಂದ ರಿಯಾಯಿತಿ ದೊರಕಲಿದೆ.
ಒಂದು ವೇಳೆ ಇದು ಸುರಕ್ಷಿತ ಅಭಯಾರಣ್ಯಗಳಲ್ಲಿ ಅಂತಾದರೆ, ಅರಣ್ಯಕ್ಕೆ ಅತಿಕ್ರಮ ಪ್ರವೇಶ ಅಂತಾದರೆ ಖಂಡಿತಾ ಶಿಕ್ಷೆ ಅನುಭವಿಸಲೇಬೇಕು. ಇಷ್ಟೇ ಅಲ್ಲದೆ ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಅರಣ್ಯ ಜೀವಿಗಳನ್ನು ಬೇಟೆಯಾಡಲು ಅಥವಾ ಗಾಯಗೊಳಿಸಲು ಕಾನೂನಿನಲ್ಲಿ ಅವಕಾಶಗಳಿವೆ.
ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಪ್ರಕಾರ ಒಂದು ವನ್ಯ ಜೀವಿ ಮನುಷ್ಯನ ಜೀವಕ್ಕೆ ತೊಂದರೆ ಉಂಟು ಮಾಡಬಲ್ಲದು ಅಂತ ಗೊತ್ತಾದಾಗ ಅಥವಾ ಒಂದು ಮಾರಣಾಂತಿಕ ಕಾಯಿಲೆಗೆ ತುತ್ತಾದಾಗ ಅಥವಾ ಯಾವುದಾದರೂ ಪ್ರಮುಖ ಅಂಗಾಗಗಳನ್ನು ಕಳೆದುಕೊಂಡು ಚೇತರಿಸಿಕೊಳ್ಳಲಾಗದಷ್ಟು ವೈಕಲ್ಯ ಅನುಭವಿಸಿದಾಗ ಚೀಫ್ ವೈಲ್ಡ್ ಲೈಫ್ ವಾರ್ಡನ್ ಆದೇಶವನ್ನು ಹೊರಡಿಸಿದರೆ ಮಾತ್ರ ಆ ಪ್ರಾಣಿಯನ್ನು ಗಾಯಗೊಳಿಸಬಹುದಾಗಿದೆ ಅಥವಾ ವಧಿಸಬಹುದಾಗಿದೆ. ಇದರಲ್ಲಿ ಮಾನವನ ಜೀವನ ಮತ್ತು ಆಸ್ತಿಗೆ ತೊಂದರೆಯಾದರೂ ಉದಾಹರಣೆಗೆ ವ್ಯವಸಾಯಕ್ಕೆ ತೊಂದರೆಯಾದಾಗಲೂ ಈ ಅವಕಾಶವಿದೆ.