ನ್ಯೂಸ್ ನಾಟೌಟ್: ಹಣದ ಮೊತ್ತವಾಗಲಿ ಅಥವಾ ಖಾತೆ ಸಂಖ್ಯೆಯೇ ಆಗಲಿ ಒಂದು ನಂಬರ್ ಹೆಚ್ಚು ಕಡಿಮೆಯಾದರೂ ಹಣ ಇನ್ಯಾವುದೋ ಖಾತೆ ಸೇರುತ್ತದೆ. ಮಹಿಳೆಯೊಬ್ಬರು ಏನೋ ಯೋಚಿಸುತ್ತಾ ಹಣ ಟ್ರಾನ್ಸ್ಫಾರ್ ಮಾಡಿದ್ದು, ತಮ್ಮ ಖಾತೆಯಲ್ಲಿದ್ದ ಬರೋಬ್ಬರಿ 6 ಲಕ್ಷ ರೂಪಾಯಿಯನ್ನು ಟಿಪ್ಸ್ ನೀಡಿ ಈಗ ಬ್ಯಾಂಕ್ ಜೊತೆ ಹಣ ರೀಫಂಡ್ ಮಾಡುವಂತೆ ಹೋರಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ವೆರಾ ಕಾನರ್ ಎಂಬ ಮಹಿಳೆ ಹೀಗೆ ಹಣ ಟ್ರಾನ್ಸ್ಫಾರ್ ಮಾಡಿ ಪೇಚಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಸಬ್ವೇಯೊಂದರಲ್ಲಿ ಸ್ಯಾಂಡ್ ವಿಚ್ ಸೇವಿಸಿದ ಇವರು ಇದಕ್ಕಾಗಿ ಹಣ ಪಾವತಿ ಮಾಡುವ ವೇಳೆ ಸ್ಯಾಂಡ್ವಿಚ್ ಮೌಲ್ಯ ಹಾಗೂ ಟಿಪ್ಸ್ ಸೇರಿಸಿ 7.54 ಡಾಲರ್ ಅಂದರೆ 628 ರೂಪಾಯಿಯನ್ನು ಪಾವತಿ ಮಾಡಬೇಕಿತ್ತು. ಆದರೆ ಹೀಗೆ ಹಣ ಪಾವತಿ ಮಾಡುವ ವೇಳೆ ಮಹಿಳೆ ಏನೋ ಯೋಚನೆಯಲ್ಲಿ ಮುಳುಗಿ, 7.54 ಡಾಲರ್ ಬದಲು 7,105.44 ಸಾವಿರ ಡಾಲರ್ ಅಂದರೆ (5,91,951) ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಆಫ್ ಅಮೆರಿಕಾ ಕ್ರೆಡಿಟ್ ಕಾರ್ಡ್ ಬಳಸಿ ಈ ಪಾವತಿ ಮಾಡಿದ್ದು ಈಗ ಮಹಿಳೆ ಹಣ ಹಿಂಪಡೆಯಲು ಪರದಾಡುತ್ತಿದ್ದಾರೆ.
ಇಷ್ಟೊಂದು ಮೊತ್ತದ ಹಣ ಕಡಿತಗೊಂಡರೂ ಈ ವಿಚಾರ ಆಕೆಗೆ ಆಗಲೇ ತಿಳಿದಿಲ್ಲ, ವಾರದ ನಂತರ ಆಕೆ ಕ್ರೆಡಿಟ್ ಕಾರ್ಡ್ (credit card) ಸ್ಟೇಟ್ಮೆಂಟ್ ಪರೀಕ್ಷಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಆಘಾತಗೊಂಡಿರುವುದಾಗಿ ವರದಿ ತಿಳಿದೆ.
ಇದಾದ ನಂತರ ಈಕೆ ಈ ಬಗ್ಗೆ ಬ್ಯಾಂಕ್ ಆಫ್ ಅಮೆರಿಕಾಗೆ ದೂರು ನೀಡಿದ್ದಾಳೆ. ಆದರೆ ಆಕೆಯ ಮಾತನ್ನು ಬ್ಯಾಂಕ್ ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ, ಈ ಬಗ್ಗೆ ಸಬ್ವೇ ಮ್ಯಾನೇಜರ್ ಅವರನ್ನು ಕೂಡ ಸಂಪರ್ಕಿಸಿದ್ದು ಅವರು ಕೂಡ ಆಕೆಗೆ ಸಮಾಧಾನವಾಗುವ ಉತ್ತರ ನೀಡಿಲ್ಲ, ಅಲ್ಲದೇ ಬ್ಯಾಂಕ್ ಕೂಡ ಹಣ ರೀಫಂಡ್ ಮಾಡಬೇಕೆನ್ನುವ ಮಹಿಳೆಯ ಮನವಿಯನ್ನು ತಿರಸ್ಕರಿಸಿದೆ ಎಂದು ವರದಿ ತಿಳಿಸಿದೆ.
ಇದಾದ ನಂತರ ಆಕೆ ಮತ್ತೆ ಎರಡನೇ ಬಾರಿಗೆ ಬ್ಯಾಂಕ್ಗೆ ಮನವಿ ಮಾಡಿದ್ದಾಳೆ. ಘಟನೆ ನಡೆದ ತಿಂಗಳ ನಂತರ ಮಹಿಳೆಯ ಖಾತೆಗೆ ಹೆಚ್ಚುವರಿ ಹಣ ಕ್ರೆಡಿಟ್ ಆಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.