ನ್ಯೂಸ್ ನಾಟೌಟ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿಗೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಎಲ್ಲಾ ಉದ್ಯೋಗಿಗಳನ್ನು ಕಚೇರಿಯಿಂದ ಆಚೆ ಕಳುಹಿಸಿ, ಪೊಲೀಸರಿಗೆ ವಿಷಯ ತಿಳಿಸಿದ ಘಟನೆ ಇಂದು(ನ.14) ಬೆಂಗಳೂರಿನಲ್ಲಿ ನಡೆದಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಪರಪ್ಪನ ಅಗ್ರಹಾರದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಕಂಪನಿಯ ಇಡೀ ಕಟ್ಟಡವನ್ನು ಜಾಲಾಡಿತು. ಜೊತೆಗೆ, ಟೆಕ್ಕಿಗಳನ್ನು ಕಂಪನಿಗೆ ಕರೆತರುವ ವಾಹನಗಳನ್ನು ಪರಿಶೀಲನೆ ನಡೆಸಿದರು. ಆನಂತರ ಅದು ಹುಸಿ ಕರೆಯೆಂಬುದು ಗೊತ್ತಾಗಿದ್ದರಿಂದ ಎಲ್ಲರೂ ನಿರಾಳರಾದರು ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ಟಿಸಿಎಸ್ ಕಂಪನಿಯಿಂದ ವಜಾಗೊಂಡಿದ್ದ ಉದ್ಯೋಗಿಯೊಬ್ಬರು ಈ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದೆ.
ಆಕೆಯನ್ನು ಬೆಳಗಾವಿ ಮೂಲದ ಶೃತಿ ಎಂದು ಗುರುತಿಸಲಾಗಿದೆ. ಆಕೆಯನ್ನು ಇತ್ತೀಚೆಗೆ ಕಂಪನಿಯ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ಆಕೆ, ನ. 14ರಂದು ಬೆಳಗ್ಗೆ ಕುಡಿದ ಮತ್ತಿನಲ್ಲಿ ಕಂಪನಿಯ ಬಸ್ ಚಾಲಕನೊಬ್ಬನಿಗೆ ಕರೆ ಮಾಡಿ, ಕಂಪನಿಯ ಕಟ್ಟಡದ ‘ಬಿ’ ಬ್ಲಾಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯರ ಹೆಸರಿನಲ್ಲಿ ಕರೆ ಮಾಡಿದ್ದಾಳೆ ಎನ್ನಲಾಗಿದೆ.
ಕರೆ ಬಂದ ಕೂಡಲೇ ಎಚ್ಚೆತ್ತ ಬಸ್ ಚಾಲಕ ಕೂಡಲೇ ಕಂಪನಿಯ ಸಿಬ್ಬಂದಿಗೆ ವಿಷಯ ತಿಳಿಸಿದ್ದ ಎನ್ನಲಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಶೃತಿಯನ್ನು ಕರೆಯಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ವಿಚಾರಣೆಯಲ್ಲಿ ಆಕೆಯ ತಪ್ಪು ಸಾಬೀತಾದರೆ ಆಕೆಯನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.