ನ್ಯೂಸ್ ನಾಟೌಟ್: ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿಗಳ ಚರ್ಮ, ಕೊಂಬು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಸಂಗ್ರಹ ಮಾಡುವುದು ಅಪರಾಧವಾಗಿದೆ. ಈ ರೀತಿ ಸಂಗ್ರಹಿಸಿದ್ದ ಮನೆಯವರನ್ನು ಬಂಧಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಇಂದು ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆ ಪ್ರಸನ್ನ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಸವನಗದ್ದೆ ಪ್ರಸನ್ನ ಎಂಬಾತನಿಂದ ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ.
ವನ್ಯಜೀವಿ ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಆರೋಪದಡಿ ಪ್ರಸನ್ನ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅರಣ್ಯಾಧಿಕಾರಿಗಳ ಕ್ರಮವನ್ನು ವಿರೋಧಿಸಿದರು. ಅಲ್ಲದೆ ಪ್ರಸನ್ನ ಅವರಿಗೆ ವಯಸ್ಸಾಗಿದೆ, ಅವರನ್ನು ಬಂಧಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ವೇಳೆ ಅರಣ್ಯ ಇಲಾಖೆಯ ಪಿಸಿಸಿಎಫ್ ಸೇರಿದಂತೆ ಮೇಲಾಧಿಕಾರಿಗಳ ಜೊತೆ ಆರಗ ಜ್ಞಾನೇಂದ್ರ ಮೊಬೈಲ್ನಲ್ಲಿ ಮಾತನಾಡಿ, ಪ್ರಸನ್ನ ಅವರನ್ನು ಬಂಧಿಸದಂತೆ ಸೂಚಿಸಿದರು. ಒಂದು ವೇಳೆ ಆತನನ್ನು ಬಂಧನ ಮಾಡಿದ್ರೆ, ಪ್ರತಿಭಟನೆ ನಡೆಸುವುದಾಗಿ ಹಾಗೂ ಅವರ ಜೊತೆ ತಮ್ಮನ್ನು ಕೂಡ ಬಂಧಿಸುವಂತೆ ಅಡ್ಡಿಪಡಿಸಿದರು ಎನ್ನಲಾಗಿದೆ. ಬಂಧಿಸಲು ಬಂದಿದ್ದ ಎಸಿಎಫ್ ಅವರ ತಂಡ ಕಾಡುಕೋಣ ಹಾಗೂ ಜಿಂಕೆಯ ಕೊಂಬುಗಳನ್ನು ಮಾತ್ರ ವಶಕ್ಕೆ ಪಡೆದು ವಾಪಸ್ ಹೋಗಿದ್ದಾರೆ ಎಂದು ವರದಿ ತಿಳಿಸಿವೆ.
ವಯಸ್ಸಾದ ಪ್ರಸನ್ನ ತುಂಬ ಸಜ್ಜನಿಕೆಯ ವ್ಯಕ್ತಿ. ಅವರ ಕುಟುಂಬ ಈ ಭಾಗದಲ್ಲಿ ಪ್ರಸಿದ್ಧಿಯಾಗಿದೆ. ಅವರ ಮನೆಯಲ್ಲಿ ಸಿಕ್ಕ ಪ್ರಾಣಿಗಳ ಕೊಂಬುಗಳು ನೂರಾರು ವರ್ಷದಷ್ಟು ಹಿಂದಿನವು. ಈ ಕುಟುಂಬ ಬೇಟೆಯಾಡುವುದಿಲ್ಲ. ಅವರು ಮನೆ ಬಳಿ ಬಂದ ಮಂಗಳನ್ನು ಬೆದರಿಸುತ್ತಾರೆ ಬಿಟ್ಟರೆ, ಬೇರೆ ಏನನ್ನು ಮಾಡುವುದಿಲ್ಲ. ಇಂತಹವರನ್ನು ಬಂಧಿಸಲು ಆಗಮಿಸಿದ್ದು ಖಂಡನೀಯವಾಗಿದೆ. ಅರಣ್ಯಾಧಿಕಾರಿಗಳು ತಮ್ಮ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.