ನ್ಯೂಸ್ ನಾಟೌಟ್: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ವರದಿ ತಿಳಿಸಿದೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನ ಸೌಧದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಡಿಕೆಶಿ ವಿರುದ್ಧ ತನಿಖೆಯನ್ನು ಸಿಬಿಐಗೆ ವಹಿಸಲು ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು.
ಕಾನೂನಾತ್ಮಕವಾಗಿ ಸ್ಪೀಕರ್ ರಿಂದ ನಿರ್ಣಯ ಪಡೆಯಬೇಕಿತ್ತು. ಅದನ್ನು ಪಡೆದಿರಲಿಲ್ಲ. ಸಿಬಿಐಗೆ ಮಂಜೂರಾತಿ ನೀಡಿದ್ದರು. ಹಿಂದಿನ ಅಡ್ವೊಕೇಟ್ ಜನರಲ್ ಮತ್ತು ನಮ್ಮ ಸರ್ಕಾರದ ಅಡ್ವೊಕೇಟ್ ಜನರಲ್ ಅಭಿಪ್ರಾಯ ವನ್ನು ಗಂಭೀರವಾಗಿ ಪರಿಗಣಿಸಿ ಸ್ಪೀಕರ್ ರಿಂದ ಪಡೆಯಬೇಕಾದ ಅನುಮತಿಯನ್ನು ನಿಯಮಾನುಸಾರವಾಗಿ ಪಡೆಯದೆ ಅಂದಿನ ಸರ್ಕಾರ ತೆಗೆದುಕೊಂಡಿದ್ದ ಕ್ರಮ ಕಾನೂನು ಪ್ರಕಾರವಾಗಿ ಇರದ ಕಾರಣ ಅದನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ(ನ.24) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆಶಿ ಗೈರಾಗಿದ್ದರು. ಹಿತಾಸಕ್ತಿ ಸಂಘರ್ಷ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಇದೇ ಅಕ್ರಮ ಆಸ್ತಿ ಗಳಿಗೆ ಪ್ರಕರಣ ನ.29ರಂದು ಹೈ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.ಅಂದು ನಡೆಯುವ ವಿಚಾರಣೆ ವೇಳೆ ಸಚಿವ ಸಂಪುಟದ ತೀರ್ಮಾನವನ್ನು ಕೋರ್ಟ್ ಗೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸರ್ಕಾರದ ಈ ನಿರ್ಧಾರ ವಾಪಾಸ್ ಪಡೆಯದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಬಿಜೆಪಿ ಶಾಸಕ ಯತ್ನಾಳ್ ತಿಳಿಸಿದ್ದಾರೆ.