ನ್ಯೂಸ್ ನಾಟೌಟ್ : ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಬ್ಬದ ವಾತಾವರಣವೇ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಕರಾವಳಿಯ ಕೋಣಗಳ ಓಟದ ಸ್ಪರ್ಧೆ ರಾಜಧಾನಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ.ಸಾಂಸ್ಕೃತಿಕ ವೈಭವದ ಜತೆಜತೆಗೆ ಬಿಸಿ ಬಿಸಿಯಾದ ರುಚಿಕರ ಅಡುಗೆ ಕೂಡ ಎಲ್ಲರ ಹಸಿವನ್ನು ತಣಿಸುತ್ತಿದೆ.
ಹೌದು,ಬೆಂಗಳೂರು ಕಂಬಳಕ್ಕೆ ಆಗಮಿಸಿರುವ ಅತಿಥಿಗಳಿಗೆ, ಕೋಣಗಳ ಯಜಮಾನರಿಗೆ, ಪರಿಚಾರಕರಿಗೆ, ಸ್ವಯಂ ಸೇವಕರಿಗೆ ಸೇರಿ ಸಾವಿರಾರು ಮಂದಿಗೆ ದಿನಕ್ಕೆ ಮೂರು ಬಾರಿ ಎಂಬಂತೆ ಮೂರೂ ದಿನವೂ ವಿಶೇಷ ಅಡುಗೆಯ ವ್ಯವಸ್ಥೆಯನ್ನು ಮಾಡಲಾಗಿದೆ.ಸಸ್ಯಾಹಾರ ಮಾತ್ರವಲ್ಲದೇ ಮಾಂಸಾಹಾರ ಅಡುಗೆ ಕೂಡ ಸಿದ್ಧಗೊಂಡಿದ್ದು,ತರಹೇವಾರಿ ಐಟಂಗಳಿಂದ ಕೂಡಿದೆ. ಕುಚ್ಚಿಗೆ ಅಕ್ಕಿ ಅನ್ನ, ಮೂಡೆ, ಬಿಸ್ಕುಟ್ ಅಂಬಡೆ ಸೇರಿದಂತೆ ಅಪ್ಪಟ ಕರಾವಳಿ ಶೈಲಿಯ ಭೋಜನ ಕಂಬಳಕ್ಕೆ ಬಂದವರ ಹೊಟ್ಟೆ ತಣಿಸಲು ರೆಡಿಯಾಗಿದೆ.
ವಿಶೇಷವೆಂದರೆ ಪ್ರಸಿದ್ಧ ಬಾಲಿವುಡ್ ಸೆಲೆಬ್ರೆಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಇಟಲಿಯಲ್ಲಿ ನಡೆದ ಮದುವೆಯಲ್ಲಿ ವಿಶೇಷ ಅಡುಗೆ ತಯಾರಕರಿಂದ ಅಡುಗೆ ರೆಡಿಯಾಗಿತ್ತು.ಇದನ್ನುಂಡ ಸೆಲೆಬ್ರಿಟಿಗಳು ಸೇರಿದಂತೆ ಇತರರು ಅಡುಗೆಯನ್ನು ಹಾಡಿ ಹೊಗಳಿದ್ದರು.ಇದೀಗ ಅದೇ ಬಾಣಸಿಗರಿಂದ ಈ ಬಾರಿ ಬೆಂಗಳೂರು ಕಂಬಳದಲ್ಲಿ ಅಡುಗೆ ತಯಾರು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.ಬೆಂಗಳೂರಿನ ಸೋನಾ ಕೇಟರಿಂಗ್ನ ಮಾಲೀಕ ಸೋನಾ ಗಣೇಶ್ ನಾಯಕ್ ಅವರ 150 ಸಿಬ್ಬಂದಿಗಳ ತಂಡವು ಭೋಜನ ತಯಾರು ಮಾಡುತ್ತಿದೆ.
ಬೆಳಗಿನ ಉಪಹಾರಕ್ಕಾಗಿ ಮೂಡೆ ಸಾಂಬಾರ್, ಬನ್ಸ್, ದೋಸೆ, ಬಿಸ್ಕುಟ್ ಅಂಬಡೆ, ಪಲಾವ್ ಸೇರಿ ಹಲವು ಬಗೆಗಳ ತಿಂಡಿ ವ್ಯವಸ್ತೇ ಮಾಡಲಾಗಿದೆ. ಊಟಕ್ಕೆ ಕರಾವಳಿ ಶೈಲಿಯ ಭೋಜನದಲ್ಲಿ ಕುಚ್ಚಲಕ್ಕಿ ಅನ್ನ, ಗಂಜಿ, ಚಿಕನ್ ಪುಳಿಮುಂಚಿ, ಕಬಾಬ್, ಮೀನು ಊಟ ,ಐದು ಸಾವಿರ ಮೂಡೆ, ಹತ್ತು ಸಾವಿರ ಬಿಸ್ಕುಟ್ ಅಂಬಡೆ, 500 ಕೆಜಿ ಪಲಾವ್ ಮಾಡಲಾಗಿದ್ದರೆ, 1000 ಕೆಜಿ ಚಿಕನ್, 5000 ಬಂಗುಡೆ ಮೀನು, ಒಂದು ಟನ್ ಕುಚ್ಚಲಕ್ಕಿ ಒಂದು ಹೊತ್ತಿನ ಊಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಒಂದು ಸಮಯಕ್ಕೆ 15 ರಿಂದ 20 ಸಾವಿರ ಜನರಿಗೆ ಆಗುವಷ್ಟು ಅಡುಗೆ ಸಿದ್ಧತೆ ಮಾಡಲಾಗಿದೆ.