ನ್ಯೂಸ್ ನಾಟೌಟ್ : ವಿದ್ಯುತ್ ಕಳವು ಆರೋಪದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಪೋಸ್ಟರ್ ಗಳನ್ನು ಅಂಟಿಸಿರುವುದು ಮಂಗಳವಾರ(ನ.14) ಬೆಳಕಿಗೆ ಬಂದಿದೆ.
ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ಮಾಜಿ ಸಿಎಂ ಮೇಲೆ ಬೆಸ್ಕಾಂ ಜಾಗೃತ ದಳ ಪ್ರಕರಣದ ದಾಖಲಿಸಿಕೊಂಡಿತ್ತು. ಹೀಗಾಗಿ ಎಚ್ಡಿಕೆ ವ್ಯಂಗ್ಯವಾಡಲು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನಡುವೆ ಪೋಸ್ಟರ್ ಕುರಿತು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪೋಸ್ಟರ್ ತೆಗೆಯುವ ಕೆಲಸ ಮಾಡಿದರು.
ಕುಮಾರಸ್ವಾಮಿ ವಿರುದ್ಧ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆ 135ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ದಾಖಲಾಗಿದೆ.
ಕುಮಾರಸ್ವಾಮಿ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಬಳಸಿದ ವಿಚಾರ ರಾಜ್ಯ ರಾಜಕೀಯ ಕೆಸೆರೆರಚಾಟಕ್ಕೆ ಕಾರಣವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಡಿಸಿಎಂ ಹೇಳಿದ್ದರು.
ಈ ವಿಚಾರವಾಗಿ ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದು, ತಮ್ಮ ಅರಿವಿಗೆ ಬಾರದೆ ಪ್ರಮಾದವಾಗಿದೆ. ಬೆಸ್ಕಾಂ ಅಧಿಕಾರಿಗಳ ತನಿಖೆಗೆ ಸಹಕರಿಸುವೆ. ದಂಡ ಪಾವತಿಸುವೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಕರೆಂಟ್ 200 ಯುನಿಟ್ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ. ಕರೆಂಟ್ ಕದ್ದರೂ ಎಚ್ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಟರ್ಗಳಲ್ಲಿ ಬರೆಯಲಾಗಿದೆ ಮತ್ತು ಈಗ ಇದು ಎಲ್ಲೆಡೆ ವೈರಲ್ ಆಗುತ್ತಿದೆ.