ನ್ಯೂಸ್ ನಾಟೌಟ್ : ಚಂದ್ರಯಾನ 3 ಯಶಸ್ಸಿನ ಬಳಿಕ ಹಲವು ಬಗೆಗಳಿಂದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಸುದ್ದಿಯಲ್ಲಿದ್ದಾರೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಾಡಿದ ಭಾರತದ ಮಾದರಿಯನ್ನು ಇದೀಗ ಇತರ ದೇಶಗಳು ಅನುಸರಿಸಲು ಮುಂದಾಗಿದೆ.
ವಿಶ್ವಾದ್ಯಂತ ಇಸ್ರೋ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗಿದೆ. ಈ ಸಾಧನೆ ರೂವಾರಿಯಾಗಿರುವ ಎಸ್ ಸೋಮನಾಥನ್ ಯುವ ಪೀಳಿಗೆ ಸ್ಪೂರ್ತಿಯಾಗಲು ಮಳೆಯಾಳಂ ಭಾಷೆಯಲ್ಲಿ ಆತ್ಮಚರಿತ್ರೆ ಬರೆದಿದ್ದಾರೆ. ನಿಲಾವು ಕುಡಿಚ್ಚ ಸಿಂಹಗಳ್( ಬೆಳದಿಂಗಳ ಕುಡಿದ ಸಿಂಹಗಳು) ಹೆಸರಿನ ಈ ಆತ್ಮಚರಿತ್ರೆ ಭಾರಿ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸೋಮನಾಥ್ ಆತ್ಮಚರಿತ್ರೆಯನ್ನು ಪ್ರಕಟಣೆಯಿಂದಲೇ ಹಿಂಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಚಂದ್ರಯಾನ 3ರ ಯಶಸ್ಸಿನ ಹಾಗೂ ರೋಚಕ ಪಯಣವನ್ನು ಸೋಮನಾಥ್ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಈ ಆತ್ಮಚರಿತ್ರೆ ಪ್ರಕಟಣೆಗೆ ಕೋಝಿಕೋಡ್ ನ ಲಿಪಿ ಬುಕ್ಸ್ ಪ್ರಕಾಶನಕ್ಕೆ ನೀಡಲಾಗಿತ್ತು. ಆದರೆ ಈ ಪ್ರಕಾಶನ ಕೆಲ ಅಧ್ಯಾಯನಗಳನ್ನು ಪ್ರಚಾರದ ರೂಪದಲ್ಲಿ ಬಿಡುಗಡೆ ಮಾಡಿದೆ. ಇದರ ಒಂದು ಭಾಗವನ್ನು ಮಲೆಯಾಳಂ ಸುದ್ಧಿ ಮಾಧ್ಯಮ ಪ್ರಕಟಿಸಿತ್ತು. ಇಷ್ಟೇ ಅಲ್ಲ ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ತಮ್ಮನ್ನು ಇಸ್ರೋ ಅಧ್ಯಕ್ಷರಾಗುವುದನ್ನು ತಡೆದಿದ್ದರು ಅನ್ನೋ ಅರ್ಥದ ಅಧ್ಯಾಯ ವಿವಾದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಮಾಧ್ಯಮದಲ್ಲಿ ಸುದ್ದಿ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸೋಮನಾಥ್, ನನ್ನ ಆತ್ಮಚರಿತ್ರೆ ಆಯ್ದ ಭಾಗದ ಅಧ್ಯಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ವಾಕ್ಯಗಳನ್ನು ಕತ್ತರಿಸುವ ವೇಳೆ ಅನರ್ಥ ಮಾಡಲಾಗಿದೆ. ಮಾಜಿ ಚೇರ್ಮೆನ್ ಕೆ ಶಿವನ್, ನನ್ನನ್ನು ಚೇರ್ಮೆನ್ ಆಗಲು ತಡೆದಿದ್ದರು ಎಂದು ನಾನು ಎಲ್ಲೂ ಹೇಳಿಲ್ಲ. ಇಸ್ರೋ ಸಾಧನೆ ಹಾದಿಯ ಆತ್ಮಚರಿತ್ರೆ ಇದಾಗಿದೆ. ಇದು ಒಂದು ತಂಡವಾಗಿ ಮಾಡಿದ ಸಾಧನೆಯಾಗಿದೆ. ಬಾಹ್ಯಾಕಾಶ ಕಮಿಷನ್ ಸಮಿತಿಯ ಸದಸ್ಯನಾಗಿರುವುದೇ ಚೇರ್ಮೆನ್ ಜವಾಬ್ದಾರಿಯತ್ತ ನನ್ನನ್ನು ಕೊಂಡೊಯ್ದಿದೆ. ಮತ್ತೊಂದು ಇಸ್ರೋ ಘಟಕದ ನನಗೆ ಮುಖ್ಯ ಇಸ್ರೋದ ಚೇರ್ಮೆನ್ ಆಗುವ ಸಾಧ್ಯತೆ ಕಡಿಮೆ ಇತ್ತು ಎಂದಿದ್ದೇನೆ ಎಂದು ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.
ಕೇವಲ ಸ್ಪಷ್ಟನೆ ನೀಡಿ ಸೋಮನಾಥ್ ಸುಮ್ಮನಾಗಿಲ್ಲ. ಆತ್ಮಚರಿತ್ರೆಯನ್ನು ಪ್ರಕಟಣೆಯಿಂದಲೆ ಹಿಂಪಡೆದಿದ್ದಾರೆ. ಈ ಆತ್ಮಚರಿತ್ರೆ ಬರೆಯಲು ಮುಖ್ಯ ಕಾರಣ, ಇದು ಸ್ಪೂರ್ತಿದಾಯಕ ಪಯಣವಾಗಿದೆ. ಈ ದಾರಿಯಲ್ಲಿ ಎದುರಿಸಿದ ಸವಾಲು, ಬಾಹ್ಯಾಕಾಶ ತಂತ್ರಜ್ಞಾನಿಯಿಂದ ಚಂದ್ರಯಾನ 3ರ ಯಶಸ್ಸಿನ ವರೆಗಿನ ಸಾಧನೆಯ ಪಯಣದ ರೋಚಕ ಘಟನೆಗಳಾಗಿದೆ. ಇದನ್ನು ಯುವ ತಲೆಮಾರಿಗೆ ಹೇಳುವ ಪ್ರಯತ್ನ ಮಾಡಿದ್ದೇನೆ. ಆದರೆ ವಿವಾದ ಸೃಷ್ಟಿಸುವ ಉದ್ದೇಶ ಇಲ್ಲ ಎಂದು ಸೋಮನಾಥ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.