ನ್ಯೂಸ್ ನಾಟೌಟ್: ನಾಲ್ಕು ವರ್ಷದ ಇಸ್ರೇಲಿ-ಅಮೇರಿಕನ್ ಬಾಲಕಿ ಸೇರಿ ಮೂರನೇ ಬ್ಯಾಚ್ನ 17ಕ್ಕೂ ಹೆಚ್ಚು ಮಂದಿಯನ್ನು ಹಮಾಸ್ ಭಾನುವಾರ ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ 150 ಪ್ಯಾಲೆಸ್ತೇನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಮೂರನೇ ಬ್ಯಾಚ್ನ 13 ಇಸ್ರೇಲಿಗಳು ಮತ್ತು 4 ವಿದೇಶಿ ಪ್ರಜೆಗಳ ಮೂರನೇ ಬ್ಯಾಚ್ ಅನ್ನು ರೆಡ್ ಕ್ರಾಸ್ ಸಂಸ್ಥೆಗೆ ಹಮಾಸ್ ಹಸ್ತಾಂತರಿಸಿದೆ ಎಂದು ಹೇಳಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ನವೆಂಬರ್ 24 ರಂದು ಪ್ರಾರಂಭವಾಗಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಜಾ ಪಟ್ಟಿಗೆ ತೆರಳಿ ಸೈನಿಕರಿಗೆ ಸ್ಫೂರ್ತಿ ತುಂಬಿದರು. ಮೊದಲು ಹಮಾಸ್ ಅನ್ನು ನಾಶ ಮಾಡುವುದು ಹಾಗೂ ಎರಡನೆಯದು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಮರಳಿ ತರುವುದು ನಮ್ಮ ಮೂಲ ಉದ್ದೇಶ ಎಂದರು.
ಹಮಾಸ್ ಶನಿವಾರ ರಾತ್ರಿ ಒತ್ತೆಯಾಳುಗಳ 2ನೇ ಬ್ಯಾಚ್ನಲ್ಲಿ 17 ಜನರನ್ನು ಬಿಡುಗಡೆ ಮಾಡಿತ್ತು. ಇವರಲ್ಲಿ 13 ಇಸ್ರೇಲಿಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. 4 ದಿನಗಳ ಅವಧಿಯಲ್ಲಿ ಒಟ್ಟು 50 ಒತ್ತೆಯಾಳುಗಳನ್ನು 150 ಪ್ಯಾಲೇಸ್ತೀನಿಯನ್ ಕೈದಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.