ನ್ಯೂಸ್ ನಾಟೌಟ್ :ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.ಇದೀಗ ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ನೋಟಿಸ್ ಜಾರಿ ಮಾಡುತ್ತಿದ್ದು,ತಾಕತ್ತಿದ್ದರೆ ಕುಕ್ಕರ್ನಲ್ಲಿ ಬಾಂಬ್ ಇಟ್ಟು ದೇಶದ್ರೋಹದ ಕೆಲಸ ಮಾಡುವವರನ್ನು ಗಡಿಪಾರು ಮಾಡಲಿ ಎಂದು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ರಾಜ್ಯ ಗೃಹ ಸಚಿವರಿಗೆ ಸವಾಲು ಹಾಕಿದರು.
ಅವರು ಸೋಮವಾರ ಕಡಬದಲ್ಲಿ ವಿಶ್ವಹಿಂದೂ ಪರಿಷತ್ ಕಡಬ ಪ್ರಖಂಡ ನೇತೃತ್ವದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲಿನ ಗಡಿಪಾರು ವರದಿಯನ್ನು ಹಿಂಪಡೆಯಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.”ನಮ್ಮ ಕಾರ್ಯಕರ್ತರು ಸಂವಿಧಾನ ವಿರುದ್ಧವಾಗಿ ಯಾವತ್ತೂ ನಡೆಯುವುದಿಲ್ಲ, ಅಪ್ರಾಪ್ತ ಹಿಂದೂ ಯುವತಿಯ ರಕ್ಷಣೆ ಮಾಡುವುದಕ್ಕೆ ಮುಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ,ಇದು ಯಾವ ನ್ಯಾಯ?ಸಾಲದು ಎಂಬಂತೆ ಗಡಿಪಾರು ನೋಟೀಸ್ ನೀಡಿ ಹಿಂದೂ ಕಾರ್ಯಕರ್ತರನ್ನು ದಮನ ಮಾಡುವ ಷಡ್ಯಂತರ ನಡೆಸಲಾಗುತ್ತಿದೆ. ಇದಕ್ಕೆ ನಮ್ಮ ಕಾರ್ಯಕರ್ತರು ಬೆದರುವದಿಲ್ಲ, ನಮ್ಮ ಕಾರ್ಯಕರ್ತರ ಮೇಲೆ ಎಷ್ಟೇ ಪ್ರಕರಣ ದಾಖಲಿಸಿದರೂ ನಮ್ಮ ಹಿಂದೂ ಧರ್ಮ ರಕ್ಷಣೆ, ಮಾತೆಯರ ಮಾನ ಕಾಪಾಡುವ ಕಾರ್ಯವನ್ನು ನಾವು ಕೈ ಬಿಡುವುದಿಲ್ಲ” ಎಂದು ಹೇಳಿದರು.
ನಂತರ ಮಾತುಕತೆ ಮುಂದುವರಿಸಿದ ಅವರು ಹಿಂದೂ ಸಮಾಜದ ಮಾನ ಬಿಂದುಗಳ ರಕ್ಷಣೆ, ಯುವಕರಲ್ಲಿ ದೇಶಭಕ್ತಿಯನ್ನು ಬೆಳೆಸುವ ರಾಷ್ಟ್ರ ಜಾಗೃತಿಯ ಕೆಲಸ, ಸಮಾಜದ ಯಾವುದೇ ವ್ಯಕ್ತಿಗೂ ತುರ್ತು ಪರಿಸ್ಥಿತಿ ಇದ್ದಾಗ ಯಾವುದೇ ಫಲಾಪೇಕ್ಷೆ ಇಲ್ಲದೇ ರಕ್ತದ ವ್ಯವಸ್ಥೆ, ಮನೆ ಕಟ್ಟಿಕೊಡುವ ಸೇವಾಕಾರ್ಯ, ಗೋರಕ್ಷಣೆ, ಹಿಂದೂ ಸಮಾಜದ ಮಧ್ಯೆ ಸಾಮಾರಸ್ಯದ ಹಲವು ರೀತಿಯ ಕೆಲಸ ಕಾರ್ಯವನ್ನು ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.