ನ್ಯೂಸ್ ನಾಟೌಟ್ : ಕಾಡಿನಿಂದ ನಾಡಿಗೆ ಬಂದು ಒಂಟಿ ಸಲಗ ಕಾಟ ಕೊಟ್ರೆ ಸಹಿಸೋದಕ್ಕೆ ಅಸಾಧ್ಯವಾಗಿರುತ್ತೆ.ಅಂಥದ್ರಲ್ಲಿ ೨೦ ಕಾಡಾನೆಗಳ ಹಿಂಡು ಬಂದ್ರೆ ಅಲ್ಲಿನ ಪರಿಸ್ಥಿತಿ ಹೆಂಗಿರಬೇಡ.
ಹಾಸನ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಆನೆಗಳ ದೊಡ್ಡ ಹಿಂಡೇ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಕಾಫಿ ತೋಟಕ್ಕೆ ಗಜಪಡೆ ನುಗ್ಗಿದ್ದು ಕಾಫಿ ತೋಟದಲ್ಲಿರುವ ನೀರಿನ ಹೊಂಡದಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುವ ಕಾಡಾನೆಗಳ ಹಿಂಡಿನ ವಿಡಿಯೊ ಮೊಬೈಲ್ನಲ್ಲಿ ಸೆರೆಯಾಗಿದೆ.ಈ ಆನೆಗಳ ಗುಂಪಿನಲ್ಲಿ 20ಕ್ಕೂ ಹೆಚ್ಚು ಆನೆಗಳಿದ್ದರೆ, ಅದರಲ್ಲಿ ಹತ್ತಕ್ಕೂ ಹೆಚ್ಚು ಮರಿಯಾನೆಗಳು ಅವೆಲ್ಲವೂ ಕೆರೆಯ ಒಂದು ಬದಿಯಲ್ಲಿ ಸಾಲಾಗಿ ನಿಂತು ಸೊಂಡಿಲಿನಿಂದ ನೀರೆತ್ತಿ ಕುಡಿಯುತ್ತಿದ್ದವು. ಅವುಗಳ ಉಪಟಳ, ದಾಂಧಲೆಯನ್ನು ಅನುಭವಿಸಿದ ತೋಟದ ಮಾಲೀಕರು ಮಾತ್ರ ಇದೀಗ ಸಂಕಷ್ಟದಲ್ಲಿದ್ದಾರೆ.ಈ ಭಾಗದ ರೈತರ ಸಂಕಷ್ಟ ಕೇಳುವವರಿಲ್ಲವಾಗಿದೆ. ಒಂದು ಕಡೆ ಆನೆಗಳಿಂದಾದ ಹಾನಿಯಾದರೆ, ಇನ್ನೊಂದು ಕಡೆ ಕಾಡಾನೆಗಳ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.ಹಾಡಹಗಲೇ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಜಪಡೆಯ ಹಿಂದೆ ಈಗ ಅರಣ್ಯ ಇಲಾಖೆ ಸಿಬ್ಬಂದಿ ಬಿದ್ದಿದ್ದಾರೆ. ಹಾಗಂತ ಅವರಿಗೆ ಅವುಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಕಾಡಾನೆಗಳು ಎಲ್ಲೆಲ್ಲಿ ಓಡಾಡುತ್ತಿವೆ ಎಂದು ಕಾಡಾನೆಗಳ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.