ನ್ಯೂಸ್ ನಾಟೌಟ್ : ಹಾಸನಾಂಬೆ ದೇಗುಲದ ವಿವಿಐಪಿ ಗೇಟ್ ತಳ್ಳಿ ಜನರು ನುಗ್ಗಿದ್ದ ಹಿನ್ನೆಲೆ ಆಕ್ರೋಶಗೊಂಡ ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಾಳ್ಮೆ ಕಳೆದುಕೊಂಡು ಸಕಲೇಶಪುರ ಉಪವಿಭಾಗದ ಸಹಾಯಕ ಆಯುಕ್ತೆ ಶೃತಿ ಎಂಬುವರಿಗೆ ಹೊಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕ ಅನೇಕ ದೇವಾಲಯಗಳ ಐತಿಹಾಸಿಕ ಪುರಾಣದ ಜೊತೆಗೆ ಅನೇಕ ವೈಶಿಷ್ಟಗಳನ್ನು ಹೊಂದಿರುತ್ತದೆ. ಅದರಲ್ಲಿ ಒಂದು ಹಾಸನಾಂಬಾ ದೇವಾಲಯ (Hasanamba Temple). ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಈ ದೇವಾಲಯದಲ್ಲಿ ವರ್ಷದ ಹಿಂದೆ ಹೊತ್ತಿಸಿದ ದೀಪ ಉರಿಯುತ್ತಲೇ ಇರುತ್ತದೆ. ದೇವಿಗೆ ಇಟ್ಟ ಪ್ರಸಾದ ಹಾಳಾಗುವುದಿಲ್ಲ. ಹೂವುಗಳು ಬಾಡುವುದಿಲ್ಲ.
ಈ ರೀತಿ ಅನೇಕ ಪವಾಡಗಳಿಗೆ (Miracle) ಸಾಕ್ಷಿಯಾಗಿರುವ ಹಾಸನಾಂಬಾ ದೇವಾಲಯದ ಬಾಗಿಲು ದೀಪಾವಳಿಯ (deepavali) ಸಮಯದಲ್ಲಿ 12 ದಿನಗಳ ಕಾಲ ತೆಗೆಯಲಾಗುತ್ತದೆ. ಈ ವೇಳೆ ಧಾರ್ಮಿಕ ವಿಧಿ ವಿಧಾನಗಳು ನಡೆಸಲಾಗುವುದು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹಾಸನ ಜಿಲ್ಲೆಯ (Hassan District) ಅಧಿದೇವತೆಯಾಗಿರುವ ಹಾಸನಂಬೆ ದೇಗುಲ ದರ್ಶನಕ್ಕೆ ದೂರ ದೂರುಗಳಿಂದ ಜನರು ಆಗಮಿಸುತ್ತಾರೆ.
ದೇವಿಯ ದರ್ಶನಕ್ಕೆ ಭಾರಿ ಜನಸ್ತೋಮ ಸೇರುತ್ತಿದ್ದು, ಇತ್ತೀಚೆಗೆ ಕಳಪೆ ನಿರ್ವಹಣೆಯ ವಿಚಾರದಲ್ಲಿ ಹಲವೆಡೆ ಸುದ್ದಿಯಾಗಿತ್ತು. ಶಾಸಕ ಸಿಮೆಂಟ್ ಮಂಜು ವಿವಿಐಪಿ ಗೇಟ್ ಮೂಲಕ ದೇಗುಲದ ಒಳಗೆ ಪ್ರವೇಶಿಸುತ್ತಿದ್ದಂತೆ ಶಾಸಕರ ಜೊತೆ ಗೇಟ್ ತಳ್ಳಿ ಜನರು ಒಳಗೆ ನುಗ್ಗಿದ್ದಾರೆ. ಈ ವೇಳೆ ಗರಂ ಆದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಕೈಗೆ ಹೊಡೆದು ಸುಮ್ಮನಿರುವಂತೆ ಗದರಿಸಿ ಹೇಳಿದ್ದಾರೆ.
ಬೆಳಗ್ಗೆಯಿಂದಲೇ ಜನಸಂದಣಿ ನಿಯಂತ್ರಿಸಲು ಜಿಲ್ಲಾಧಿಕಾರಿ, ಎಸ್ಪಿ ಹರಸಾಹಸ ಪಟ್ಟಿದ್ದರು ಎನ್ನಲಾಗಿದೆ. ಡಿಸಿ ಕೂಡ ವಿವಿಐಪಿ ಗೇಟ್ ಮುಂದೆ ಕುಳಿತು ರಾತ್ರಿಯವರೆಗೂ ಜನಸಂದಣಿಯನ್ನು ಖುದ್ದಾಗಿ ನಿಯಂತ್ರಿಸಿದ್ದರು.
ಇದಕ್ಕೂ ಮುನ್ನ ಡಿಸಿ ಕೂಡ ಹಲವು ಬಾರಿ ಕೈ ಜೋಡಿಸಿ ಭಕ್ತರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.