ನ್ಯೂಸ್ ನಾಟೌಟ್ : 68ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಶಾಲೆಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರು ನೀಡುವುದಾಗಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿ ಮಾತನಾಡಿದ ವೇಳೆ ಈ ಘೋಷಣೆ ಮಾಡಿದ್ದಾರೆ.
ಕಂಠೀರವ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತಮಿಳು, ಮಲಯಾಳಂ, ತೆಲುವು ಭಾಷೆ ಮಾತನಾಡಿ ಬದುಕು ನಡೆಸಬಹುದಾದ ಪರಿಸ್ಥಿತಿ ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದರು.
ಶಾಲೆಗಳಲ್ಲಿ ಕರೆಂಟ್ ಹಾಗೂ ವಾಟರ್ ಬಿಲ್ ಹೊರೆ ಹೆಚ್ಚಾಗಿದ್ದು ಇದನ್ನ ಉಚಿತ ಮಾಡುವಂತೆ ಮನವಿ ಹಿನ್ನಲೆ ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಲೆಗಳಿಗೆ ಎಷ್ಟು ವಿದ್ಯುತ್ ಬಿಲ್ ಬರ್ತಿದೆ ಎಷ್ಟು ಕೋಟಿ ಬೇಕಿದೆ ಈ ಎಲ್ಲ ಮಾಹಿತಿ ಪಡೆದು ಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಮುಂದಾಗ್ತೀವಿ ಎಂದು ಸಚಿವ ಹೇಳಿದ್ದರು.
ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ನಾಡಿನ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ದುರದೃಷ್ಟವಶಾತ್ ರಾಜ್ಯದಲ್ಲಿ ಅನೇಕ ಜಾತಿ, ಧರ್ಮ ಇದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು, ಶಿಕ್ಷಣ ಇಲಾಖೆ ಕೆಲಸ ಮಾಡಬೇಕಿದೆ. ಕನಿಷ್ಠ ಎಸ್ಎಸ್ಎಲ್ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್, ಕುಡಿಯುವ ನೀರು ಕೊಡುವಂತೆ ಒತ್ತಾಯ ಮಾಡಿದ್ದಾರೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಇಂದಿನಿಂದ ಉಚಿತವಾಗಿ ವಿದ್ಯುತ್ , ಕುಡಿಯುವ ನೀರು ನೀಡುತ್ತೇವೆ ಎಂದರು.
ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಜಾರಿಗೊಳಿಸಿದ್ದೇವೆ. 86 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಅಡಿಯಲ್ಲಿ 1.28 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲಿಗೆ ತಲಾ 170 ರೂ. ನೀಡಲಾಗಿದೆ. ಗೃಹಜ್ಯೋತಿ ಅಡಿಯಲ್ಲಿ 1 ಕೋಟಿ 38 ಲಕ್ಷ ಮನೆಗಳಿಗೆ ಈ ಯೋಜನೆ ತಲುಪಿದೆ. ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 1.7 ಕೋಟಿ ಮಹಿಳೆಯರಿಗೆ ಹಣ ನೀಡಿದ್ದೇವೆ. ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದೇವೆ. ಹಿಂದಿನ ನಮ್ಮ ಸರ್ಕಾರದಿಂದಲೂ ಈ ಯೋಜನೆ ಮುಂದುವರೆಸುತ್ತಾ ಬಂದಿದ್ದೇವೆ. ಮಕ್ಕಳು ಸ್ವಾಭಿಮಾನದಿಂದ ಬೆಳೆಯುವ ವಾತಾವರಣ ನಿರ್ಮಾಣ ಮಾಡೋಣ ಎಂದು ಹೇಳಿದರು.
ಕನ್ನಡಿಗರು ಹೆಮ್ಮೆಯಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷ ತುಂಬಿದೆ. ಸಂಪ್ರದಾಯಯವನ್ನು ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.