ನ್ಯೂಸ್ ನಾಟೌಟ್ : ಕಳೆದ ಹಲವು ವರ್ಷಗಳಿಂದ ಕ್ರೀಯಾಶೀಲತೆಯಿಂದಲೇ ಗುರುತಿಸಿಕೊಂಡ ಸುಳ್ಯ ತಾಲೂಕಿನ ಅಡ್ಕಾರಿನ ‘ವೈಫೈ ಗೆಳೆಯರ’ ಬಳಗವು ಈ ಬಾರಿಯೂ ವಿಶೇಷವಾಗಿ ಎಲ್ಲರ ಗಮನ ಸೆಳೆಯುವ ‘ಗೂಡು ದೀಪ’ ತಯಾರಿಸುವ ಮೂಲಕ ಮತ್ತೆ ವೈರಲ್ ಆಗಿದ್ದಾರೆ.
ಹೌದು,ಕೆಲ ವರುಷಗಳಿಂದ ಬೆಳಕಿನ ಹಬ್ಬ ದೀಪಾವಳಿಗೆ ವಿಭಿನ್ನ ಪರಿಕಲ್ಪನೆಯಲ್ಲಿ “ಗೂಡುದೀಪ ” ರಚಿಸಿ ಮನೆ ಮಾತಾಗಿದ್ದ ‘ವೈಫೈ ಗೆಳೆಯರ’ ಬಳಗ ಈ ಬಾರಿ ದೀಪಾವಳಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.ಕೆಲವೇ ದಿನಗಳ ಹಿಂದೆಯಷ್ಟೇ ಇಡೀ ದೇಶವೇ ಹೆಮ್ಮೆಯಿಂದ ಕೊಂಡಾಡಿದ ‘ಚಂದ್ರಯಾನ -3’ ಪರಿಕಲ್ಪನೆಯನ್ನು ಇಟ್ಟುಕೊಂಡು ‘ವಿಕ್ರಮ್ ಲ್ಯಾಂಡರ್ ಹಾಗೂ ಇಸ್ರೋ ಉಡಾಯಿಸಿದ ರಾಕೆಟ್ ಇಂಜಿನ್’ ಮಾದರಿಯ ಗೂಡು ದೀಪ ತಯಾರಿಸಿದೆ.ಇದು ದೀಪಾವಳಿ ಸಂಭ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.****** ಮಕ್ಕಳೂ ಸೇರಿದಂತೆ ಅನೇಕರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಈ ವಿಭಿನ್ನ ಮಾದರಿಯ ಗೂಡುದೀಪದ ಬಗ್ಗೆ ಮಾಹಿತಿ ಪಡೆದುಕೊಂಡರು.ಸುಳ್ಯದ ಅಡ್ಕಾರ್ ಪರಿಸರದಲ್ಲಿ ಈ ಗೂಡು ದೀಪಗಳು ಕಂಗೊಳಿಸುವುದರ ಮೂಲಕ ನೋಡುಗರ ಕಣ್ಮನವನ್ನು ಸೆಳೆಯಿತು.”ದೀಪಾವಳಿ ಹತ್ತಿರ ಬರುತ್ತಿದ್ದಂತೆ ನಮ್ಮ ತಂಡ ವಿಭಿನ್ನ ಪರಿಕಲ್ಪನೆಯಲ್ಲಿ ಗೂಡು ದೀಪ ತಯಾರಿಸಬೇಕೆಂದು ಯೋಚಿಸಿದಾಗ ನಮ್ಮ ಆಲೋಚನೆಗೆ ಬಂದಿದ್ದೆ ಚಂದ್ರಯಾನ-೩.ಹೀಗಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಮಾಡಿದ ನಮ್ಮ ಹೆಮ್ಮೆಯ ವಿಜ್ಞಾನಿಗಳ ಸಾಧನೆಯನ್ನು ಅಭಿನಂದಿಸುವ ಸಲುವಾಗಿ ಈ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ” ಎಂದು ‘ವೈಫೈ ಗೆಳೆಯರ’ ಬಳಗ ಅಭಿಪ್ರಾಯ ಪಟ್ಟಿದೆ.