ನ್ಯೂಸ್ ನಾಟೌಟ್: ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ, ಬುಧವಾರ(ನ.15) ಗಾಜಾಪಟ್ಟಿಯ ಪ್ರಮುಖ ವೈದ್ಯಕೀಯ ಕೇಂದ್ರ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಹಲವು ಉಗ್ರರ ಜತೆಗೆ ರೋಗಿಗಳೂ ಸಾವಿಗೀಡಾಗಿದ್ದಾರೆಂದು ವರದಿಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಆಧರಿಸಿ ಶಿಫಾ ಆಸ್ಪತ್ರೆ ಪಶ್ಚಿಮ ಭಾಗದ ಮೇಲೆ ಭೂ ದಾಳಿಯ ಜತೆಗೆ ವಾಯುದಾಳಿ ನಡೆಸಿರುವ ಇಸ್ರೇಲ್ ಪಡೆಗಳು ಬಾಂಬ್ ಹಾಕಿದೆ. ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿಕೊಂಡು ಉಗ್ರರು ಆಶ್ರಯ ಪಡೆದಿರುವುದನ್ನು ಪತ್ತೆ ಮಾಡಿದ್ದ ಇಸ್ರೇಲ್ ಸೇನೆ, ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿತ್ತು.
ಆಸ್ಪತ್ರೆಯ ಪಶ್ಚಿಮ ಭಾಗ ಸುತ್ತುವರಿದ ಸೇನೆ, ಕೂಡಲೇ ಶರಣಾಗುವಂತೆ ಉಗ್ರರಿಗೆ ಸಂದೇಶ ರವಾನಿಸಿತು. 16 ವರ್ಷ ಮೇಲ್ಪಟ್ಟವರು ಯಾರಿದ್ದರೂ ಹೊರಗೆ ಬನ್ನಿ ಎಂದು ಧ್ವನಿ ವರ್ಧಕಗಳ ಮೂಲಕ ಆದೇಶ ನೀಡಿತು. ಬಳಿಕ ನೂರಾರು ಯೋಧರು ಬಂದೂಕುಗಳೊಂದಿಗೆ ಗುಂಡು ಹಾರಿಸುತ್ತ, ಆಸ್ಪತ್ರೆಯ ಪ್ರತಿ ಕೊಠಡಿಯಲ್ಲಿ ಉಗ್ರರ ಇರುವಿಕೆ ಪರೀಕ್ಷೆ ನಡೆಸುತ್ತಾ ಕಾರ್ಯಾಚರಣೆ ನಡೆಸಿದರು ಎನ್ನಲಾಗಿದೆ.
”ಆಸ್ಪತ್ರೆಯಲ್ಲಿ ಉಗ್ರರ ಅಡಗಿಕೊಂಡಿದ್ದ ಪ್ರದೇಶದ ಮೇಲೆ ನಿರ್ದಿಷ್ಟ ದಾಳಿ ನಡೆಸಲಾಗಿದೆ. ರೋಗಿಗಳಿಗೆ, ಸಿಬ್ಬಂದಿಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗಿಲ್ಲ,” ಎಂದು ಇಸ್ರೇಲ್ ಸೇನಾಪಡೆ ತಿಳಿಸಿದೆ.
”ಇಸ್ರೇಲ್ ಸೇನಾ ಕಾರ್ಯಾಚರಣೆಯಿಂದ ಆಸ್ಪತ್ರೆಯಲ್ಲಿಆತಂಕ ಸೃಷ್ಟಿಯಾಗಿದೆ. ಮಂಗಳವಾರದಿಂದ ಇಲ್ಲಿಯವರೆಗೆ 49 ರೋಗಿಗಳು ಮೃತಪಟ್ಟಿದ್ದಾರೆ. ಇದೊಂದು ಅಮಾನವೀಯ ದಾಳಿ,” ಎಂದು ಹಮಾಸ್ ಆರೋಗ್ಯ ಇಲಾಖೆ ಹೇಳಿದೆ. ಆಸ್ಪತ್ರೆಯ ಸಂಕೀರ್ಣದಲ್ಲಿ ಟ್ಯಾಂಕರ್ಗಳನ್ನು ನಿಲ್ಲಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ಹಾಗೂ ಆಸ್ಪತ್ರೆಯ ಹಲವು ಕಡೆಗಳಲ್ಲಿ ಸೈನಿಕರು ಹಾಗೂ ಕಮಾಂಡೊಗಳು ಸುತ್ತುವರಿದಿದ್ದಾರೆ ಎಂದು ಹಮಾಸ್ನ ಆರೋಗ್ಯ ಸಚಿವಾಲಯ ಆರೋಪಿದೆ.