ನ್ಯೂಸ್ ನಾಟೌಟ್ : ಉಡುಪಿಯ ನೇಜಾರುವಿನಲ್ಲಿ ಭಾನುವಾರ ನಡೆದಿದ್ದ ಮಹಿಳೆ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬುಧವಾರ ಸಾಯಂಕಾಲ ಉಡುಪಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರವೀಣ್ ಅರುಣ್ ಚೌಗಲೆ(39) ಬಂಧಿತ ಆರೋಪಿ. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಧೀಶ ಶ್ಯಾಮ್ಪ್ರಕಾಶ್ ಅವರ ಮುಂದೆ ಆತನನ್ನು ಹಾಜರುಪಡಿಸಲಾಯಿತು.ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಗಾಗಿ ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಆರೋಪಿ ಪರ ವಕೀಲರು ಹಾಜರಿಲ್ಲದ ಕಾರಣ ಕಾನೂನು ಸೇವಾ ಪ್ರಾಧಿಕಾರದಿಂದ ರಾಜು ಪೂಜಾರಿ ಅವರನ್ನು ನಿಯೋಜಿಸಲಾಗಿತ್ತು.ಆರೋಪಿಯು ಮಹಾರಾಷ್ಟ್ರದ ಸಾಂಗ್ಲಿ ಮೂಲದ ಆರೋಪಿ ಪ್ರವೀಣ್ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ. ವಿಮಾನಯಾನ ಸಂಸ್ಥೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದು, ಸ್ಥಿತಿವಂತನಾಗಿದ್ದ.ವಿವಾಹಿತನಾಗಿರುವ ಆರೋಪಿಗೆ ಒಂದು ಮಗೂ ಕೂಡ ಇದೆ.ಗಗನಸಖಿಯ ಮೇಲಿನ ದ್ವೇಷದಲ್ಲಿ ಈ ಕೊಲೆ ಮಾಡಿದ್ದಾನೆ.ತಡೆಯಲು ಬಂದ ತಾಯಿ ಹಾಗೂ ಇಬ್ಬರನ್ನು ಸಾಕ್ಷಿ ನಾಶಕ್ಕಾಗಿ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಗೆಯನ್ನೂ ನೀಡಿದ್ದಾನೆ. ಕೊಲೆಗೆ ನಾಲ್ಕು ಉದ್ದೇಶಗಳಿದ್ದವು ಎಂದು ಆತ ತಿಳಿಸಿದ್ದು, ಅದನ್ನು ಪರಿಶೀಲಿಸಿ ದೃಢಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್.ಪಿ. ಹೇಳಿದ್ದಾರೆ.