ನ್ಯೂಸ್ ನಾಟೌಟ್: ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ತನ್ನ ಅರೆ ಕ್ಷಣದ ದುಡುಕು ನಿರ್ಧಾರದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ನಿಶ್ಚಿತಾರ್ಥದ (Engagement) ಉಂಗುರ ಕಳೆದು ಹೋಗಿದ್ದಕ್ಕೆ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನ ದೇವರಾಯಪಟ್ಟಣದಲ್ಲಿ ಇಂದು(ನ.22) ಬೆಳಕಿಗೆ ಬಂದಿದೆ.
ಯುವಕನನ್ನು ತುಮಕೂರಿನ ಕಮಲೇಶ್ (36) ಎಂದು ಗುರುತಿಸಲಾಗಿದೆ. ಮೃತ ಯುವಕನಿಗೆ ಬೆಂಗಳೂರು ಮೂಲದ ಯುವತಿಯೊಂದಿಗೆ ಮೂರು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದ್ದು, ನಿಶ್ಚಿತಾರ್ಥದ ಉಂಗುರ ಕೆಲವು ದಿನಗಳ ಹಿಂದೆ ಸ್ನಾನಕ್ಕೆ ತೆರಳಿದ್ದ ವೇಳೆ ಕಳೆದು ಹೋಗಿತ್ತು. ಬಳಿಕ ಉಂಗುರಕ್ಕಾಗಿ ಯುವಕ ಹುಡುಕಾಟ ನಡೆಸಿದ್ದ, ಆದರೆ ಉಂಗುರ ಸಿಕ್ಕಿರಲಿಲ್ಲ. ಈ ವಿಚಾರವನ್ನು ಮನೆಯವರೊಂದಿಗೆ ಹೇಳಲು ಹೆದರಿ ನ.17 ರಂದು ಯುವಕ ವಿಷ ಸೇವಿಸಿದ್ದ ಎನ್ನಲಾಗಿದೆ.
ವಿಷ ಸೇವಿಸಿದ್ದ ಯುವಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಮಲೇಶ್ ಇಂದು ಕೊನೆಯುಸಿರೆಳೆದಿದ್ದಾನೆ. ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.