ನ್ಯೂಸ್ ನಾಟೌಟ್: ಭೂಕಂಪಪೀಡಿತ ನೆರೆ ದೇಶ ನೇಪಾಳಕ್ಕೆ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಕಳುಹಿಸಿದ್ದು, ಮಾನವೀಯತೆ ಮೆರೆದಿದೆ.
ಟೆಂಟ್ಗಳು, ಹೊದಿಕೆ, ಟಾರ್ಪಾಲಿನ್ ಶೀಟ್ಗಳು, ಅಗತ್ಯ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ 10 ಕೋಟಿ ರೂಪಾಯಿ ಮೌಲ್ಯದ ತುರ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಭಾರತೀಯ ವಾಯುಪಡೆಯ ವಿಶೇಷ ಸಿ-130 ವಿಮಾನ ಭಾನುವಾರ ನೇಪಾಳಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ, “ತುರ್ತು ಪರಿಹಾರ ಸಾಮಗ್ರಿಗಳ ಮೊದಲ ರವಾನೆಯು ಭಾನುವಾರ ನೇಪಾಲ್ಗುಂಜ್ಗೆ ಆಗಮಿಸಿತು” ಎಂದು ತಿಳಿಸಿದೆ. ವಿಶೇಷ ಭಾರತೀಯ ವಾಯುಪಡೆ ವಿಮಾನವು ಟೆಂಟ್ ಮತ್ತು ಟಾರ್ಪಾಲಿನ್ ಶೀಟ್ಗಳು, ಹೊದಿಕೆಗಳು, ಮಲಗುವ ಚಾಪೆ ಸೇರಿದಂತೆ ಅಗತ್ಯ ಔಷಧಿಗಳು ಮತ್ತು ಸಂತ್ರಸ್ತಪೀಡಿತ ಜನರಿಗೆ ಪೋರ್ಟಬಲ್ ವೆಂಟಿಲೇಟರ್ಗಳಂತಹ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ತುರ್ತು ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಭಾರತ ಸರ್ಕಾರದ ಪರವಾಗಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ನೇಪಾಳದ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ಪೂರ್ಣ ಬಹದ್ದೂರ್ ಖಡ್ಕಾಗೆ ಕರ್ನಾಲಿ ಮುಖ್ಯಮಂತ್ರಿ ರಾಜ್ ಕುಮಾರ್ ಶರ್ಮಾ ಸಮ್ಮುಖದಲ್ಲಿ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಭೂಕಂಪಪೀಡಿತರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗೆ ಅನುಗುಣವಾಗಿ ಭಾರತವು ನೆರವು ಒದಗಿಸಿದೆ, ಮುಂದಿನ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸುವ ನಿರೀಕ್ಷೆಯಿದೆ ಎಂದು ನೇಪಾಳ ಹೇಳಿಕೊಂಡಿದೆ.
ಆಪ್ತ ಸ್ನೇಹಿತ ಮತ್ತು ನೆರೆಹೊರೆಯವರಾಗಿ, ನೇಪಾಳದಲ್ಲಿ ಭೂಕಂಪದಿಂದ ಹಾನಿಗೊಳಗಾದವರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಮಿಷನ್ ಹೇಳಿದೆ.
ಶುಕ್ರವಾರ ಮಧ್ಯರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ ಪರಿಣಾಮ ಹಲವು ಅನಾಹುತಗಳ ಸಂಭವಿಸಿವೆ.