ನ್ಯೂಸ್ ನಾಟೌಟ್: ನಕಲಿ ಕರೆನ್ಸಿ ನೋಟುಗಳ (Fake Currency Note) ಹಾವಳಿ ಹೆಚ್ಚಾಗುತ್ತಿದ್ದು, ಅಸಲಿ ನೋಟುಗಳ ಜೊತೆಗೆ ಆಗಾಗ ನಕಲಿ ನೋಟುಗಳು ಬರುತ್ತಿರುವುದು ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗಿದೆ.ನಕಲಿ ನೋಟುಗಳ ಹಾವಳಿಗೆ ಸಣ್ಣ ವ್ಯಾಪಾರಿಗಳು ತಲೆಕೆಡಿಸಿಕೊಂಡಿದ್ದು, 200 ರೂಪಾಯಿ ಮುಖಬೆಲೆಯ ಕಳ್ಳ ನೋಟುಗಳ ಚಲಾವಣೆ ಹಲವು ಬಾರಿ ಕಂಡುಬಂದಿದೆ ಎನ್ನಲಾಗಿದೆ.
ವ್ಯಾಪಾರಿಗಳು ಹಣ ಪಾವತಿಸಲು ಬ್ಯಾಂಕ್ಗೆ (Bank) ಹೋದಾಗ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಒಂದೊಂದು ಕಟ್ಟಿನಲ್ಲಿ ಒಂದು, ಎರಡು ನಕಲಿ ನೋಟುಗಳು ಪತ್ತೆಯಾಗುತ್ತಿದ್ದು, ಸಣ್ಣ ವ್ಯಾಪಾರಿಗಳಿಗೆ ನಕಲಿ ನೋಟುಗಳಿಂದ ನಷ್ಟ ಭೀತಿ ಹೆಚ್ಚಾಗಿದೆ.200 ರೂಪಾಯಿ ನೋಟುಗಳ ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದ್ದು, ನಕಲಿ ನೋಟುಗಳನ್ನ ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲೇ ಚಲಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.ನಕಲಿ ನೋಟುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಬಯಲಾಗುತ್ತದೆ. ಆದರೆ ಅವಸರಲ್ಲಿ ಹಣ ಪಡೆಯುವಾಗ ಅಸಲಿ ಜೊತೆ ನಕಲಿ ನೋಟು ಇರುವುದು ಗೊತ್ತಾಗುವುದಿಲ್ಲ. ವ್ಯಾಪಾರಿಗಳ ಕೈಗೆ ಸುಲಭವಾಗಿ ನಕಲಿ ನೋಟು ಸೇರುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ 500 ರೂ. ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು. ಈಗ 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಓಡಾಡುತ್ತಿವೆ ಎನ್ನಲಾಗಿದೆ.