ನ್ಯೂಸ್ ನಾಟೌಟ್: “ಡಿ.ಕೆ.ಶಿವಕುಮಾರ್ ರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ, ಮುಂಬೈಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಫೋನ್ ಮಾಡಿ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದಿನ ರಹಸ್ಯ ಬಿಚ್ಚಿಟ್ಟು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.
ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಗೌರಿಶಂಕರ್ ಮತ್ತು ಮಂಜುನಾಥ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಹಳೆಯ ಗುಟ್ಟನ್ನು ಬಯಲು ಮಾಡಿದ್ದಾರೆ.
“ಕಾಂಗ್ರೆಸ್ ಪಕ್ಷದ 40 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಕುಮಾರಸ್ವಾಮಿ ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಅವರ ಮಾತು ಕೇಳಲು ನಾವೇನು ದಡ್ಡರೇ?ʼʼಎಂದು ಪ್ರಶ್ನಿಸಿದ್ದಾರೆ.
ʼʼಸರಕಾರಕ್ಕೆ ನಮ್ಮ ಪಕ್ಷದ 136 ಜನ ಶಾಸಕರು ಮತ್ತು ಪಕ್ಷೇತರರ ಬೆಂಬಲವಿದೆ. ಕುಮಾರಸ್ವಾಮಿ ಎನ್ ಡಿಎಯಿಂದ ಮೊದಲು ಹೊರಬನ್ನಿ, ಒಬ್ಬ ವ್ಯಕ್ತಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇರಬೇಕು ಎಂದು ಹೇಳಿದ್ದಾರೆ.
ʼʼಜೆಡಿಎಸ್ ಜಾತ್ಯತೀತ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟ ಪಕ್ಷ ಎನ್ನುವ ಕಾರಣಕ್ಕೆ 80 ಜನ ಕಾಂಗ್ರೆಸ್ ಶಾಸಕರು ಇದ್ದರೂ 30 ಸ್ಥಾನ ಗೆದ್ದಂತಹ ಪಕ್ಷಕ್ಕೆ ಬೆಂಬಲ ನೀಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿದ್ದೆವು. ಈಗ ಸರ್ಕಾರ ಬೀಳಿಸಿದವರ ಜತೆಗೇ ನೆಂಟಸ್ಥನ ಮಾಡಿದ್ದಾರೆʼʼ ಎಂದು ಆಕ್ರೋಶ ಹೊರಹಾಕಿದರು.