ನ್ಯೂಸ್ ನಾಟೌಟ್ :ಕಾಲ ಬದಲಾಗಿದೆ.ಅದರೊಂದಿಗೆ ನಾವು ಬದಲಾಗುತ್ತಿದ್ದೇವೆ.ಮಾರ್ಕೆಟ್ ಗೆ ಹೋದ್ರೆ ಸಾಕು.ಹಳೆ ಕಾಲದ ವಸ್ತುಗಳು ಹೊಸ ರೂಪವನ್ನು ಪಡೆದು ಕೊಂಡು ಗ್ರಾಹಕರ ಮನಸ್ಸನ್ನು ಸೆಳೆದು ಬಿಡುತ್ತವೆ.ಇದೀಗ ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ ಇದ್ದು,ಪೆನ್ಸಿಲ್ ರೂಪವೂ ಬದಲಾಗಿದೆ.ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು, ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಪೋಷಕರು ಇದೀಗ ಒತ್ತಾಯ ಮಾಡಿದ್ದಾರೆ. ಈ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಗಡಿಯಾರ ಎಂಬಲ್ಲಿ ನಡೆದಿದೆ.ಕೆದಿಲ ಗ್ರಾಮದ ಗಡಿಯಾರ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು, ಪೋಷಕರು ಈ ಪೆನ್ಸಿಲ್ ನ ವಿರುದ್ದ ಅಕ್ರೋಶ ಹೊರಹಾಕಿದ್ದಾರೆ. ಅಂದ ಹಾಗೆ ಇದು ಮಾರ್ಕೆಟ್ನಲ್ಲಿ ಮಾರಾಟವಾಗುತ್ತಿದ್ದ ಪೆನ್ಸಿಲ್ ಅಲ್ಲ, ಬದಲಾಗಿ ಮಾರಾಟಗಾರರು ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಈ ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು ತಿಳಿಸುತ್ತಾರೆ. ಎರಡು ದಿನಗಳ ಬಳಿಕ ಬಂದು ಪೆನ್ಸಿಲ್ ನೀಡುತ್ತಾರೆ. ರೂ.20 ಮುಖ ಬೆಲೆಯ ಈ ಪೆನ್ಸಿಲ್ ನೋಡಲು ಕೊಡಲಿಯನ್ನು ಹೋಲುವಂತಿದ್ದು, ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚು ಇದೆ ಎಂದು ಪೋಷಕರು ತಿಳಿಸಿದ್ದಾರೆ.
ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಈ ಮಾರಾಟಗಾರರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಇದೇ ರೀತಿಯ ಪೆನ್ಸಿಲ್ ಗಳನ್ನು ಮಾರಾಟ ಮಾಡಿದ್ದಾರೆನ್ನುವ ಆರೋಪಗಳು ಕೇಳಿ ಬಂದಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬದಲಾವಣೆ ಎನ್ನುವ ಗಾಳಿ ಸಣ್ಣ ಮಕ್ಕಳ ಬರವಣಿಗೆಯ ಪೆನ್ಸಿಲ್ ಗೂ ಬಂದು ತಲುಪಿದ್ದು ಇದೊಂದು ಆಘಾತಕಾರಿ ಬೆಳವಣಿಗೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.