ನ್ಯೂಸ್ ನಾಟೌಟ್ : ಉಡುಪಿ ನಾಲ್ವರ ಹತ್ಯೆ ಪ್ರಕರಣದ ಆರೋಪಿ, ‘ಏರ್ ಇಂಡಿಯಾ ಎಕ್ಸ್ಪ್ರೆಸ್’ ವಿಮಾನಯಾನ ಸಂಸ್ಥೆಯಲ್ಲಿ ಕ್ಯಾಬಿನ್ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಅರುಣ್ ಚೌಗಲೆಯನ್ನು ಸಂಸ್ಥೆಯು ಕೆಲಸದಿಂದ ಅಮಾನತು (ಡಿರೋಸ್ಟರ್)ಗೊಳಿಸಿದೆ.‘ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದ್ದು, ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡಿ, ತನಿಖೆಗೆ ಎಲ್ಲ ಸಹಕಾರ ನೀಡುತ್ತೇವೆ. ಈ ಘಟನೆ ಗಮನಕ್ಕೆ ಬಂದ ತಕ್ಷಣದಿಂದಲೇ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ’ ಎಂದು ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಉಡುಪಿ ಜಿಲ್ಲೆ ಮಲ್ಪೆ ಸಮೀಪದ ನೇಜಾರಿನ ತೃಪ್ತಿ ಲೇಔಟ್ನಲ್ಲಿ, ಸಹೋದ್ಯೋಗಿ ಅಯ್ನಾಜ್ ಹಾಗೂ ಅವರ ತಾಯಿ ಹಸೀನಾ, ಸಹೋದರಿ ಅಫ್ನಾನ್ ಮತ್ತು ತಮ್ಮ ಅಸೀಮ್ ಅವರನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರವೀಣ್ ಚೌಗಲೆಯನ್ನು ನವೆಂಬರ್ 16ರಂದು ಪೊಲೀಸರು ಬಂಧಿಸಿದ್ದರು.‘ಪೊಲೀಸ್ ಕಸ್ಟಡಿಯಲ್ಲಿರುವ ಪ್ರವೀಣ್ ಚೌಗಲೆಯ ವಿಚಾರಣೆ ಇದೀಗ ಮುಂದುವರಿದಿದೆ.ಆತನ ವ್ಯವಹಾರಗಳು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.