ನ್ಯೂಸ್ ನಾಟೌಟ್ : ಸೋಶಿಯಲ್ ಮೀಡಿಯಾ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಸವಾಲುಗಳನ್ನು ತಂದೊಡ್ಡುತ್ತಿದೆ.ಈ ಜಮಾನದಲ್ಲಿ ಹೇಗೆ ಬೇಕಾದರೂ ದುಡ್ಡು ಮಾಡಬಹುದು ಅನ್ನೋದಕ್ಕೆ ಈ ಖದೀಮನೇ ಸಾಕ್ಷಿ.ಬೆಂಗಳೂರಿನ (Bengaluru) ಯುವಕನೊಬ್ಬ ಇಂತಹ ಖತರ್ನಾಕ್ ಕೆಲಸಕ್ಕೆ ಕೈ ಹಾಕಿದ್ದು, ನೂರಾರು ಯುವತಿಯರ ಜೊತೆ ಚಾಟಿಂಗ್ ಮಾಡಿ, ನಕಲಿ ಖಾತೆ (Fake Account) ಸೃಷ್ಟಿಸಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.
ಹೌದು,ಯುವತಿಯರು ದೂರು ಕೊಡುತ್ತೇವೆ ಹೇಳಿದಾಗ ಡೀಪ್ಫೇಕ್ ಮಾಡಿ ಮಾನ, ಮಾರ್ಯದೆ ತೆಗೆಯುತ್ತೇನೆ ಎಂದು ಅವಾಜ್ ಹಾಕುತ್ತಿದ್ದ.ಆದರೆ ರಕ್ಷಣೆ ನೀಡಬೇಕಾದ ಪೊಲೀಸರೇ ಖದೀಮನ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಉತ್ತರಹಳ್ಳಿಯ (Uttarahalli) ನಿವಾಸಿಯಾಗಿರುವ ರಾಘವೇಂದ್ರ ನೋಡಲು ಡೀಸೆಂಟ್ ಹುಡುಗನ ಥರ ಕಾಣಿಸಿದರೂ ಮಹಾನ್ ಕಿಲಾಡಿಯಾಗಿದ್ದು,ಸೈಬರ್ ಬಗ್ಗೆ ಅತೀವ ಬುದ್ದಿವಂತನಾಗಿದ್ದಾನೆ. ಇನ್ಸ್ಟಾಗ್ರಾಂನಲ್ಲಿ (Instagram) ಯುವತಿಯರ ಫೋಟೋ, ರೀಲ್ಸ್ ವೀಡಿಯೋಗಳನ್ನು ಕದ್ದು, ಫೇಸ್ಬುಕ್ನಲ್ಲಿ (Facebook) ನಕಲಿ ಖಾತೆ ಸೃಷ್ಟಿಸಿ ನೂರಾರು ಜನರಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದ ಖತರ್ನಾಕ್ ಸೈಬರ್ ಕಳ್ಳ ಇದೀಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಕಮಲಾನಗರದ ತ್ರಿವೇಣಿ ಎಂಬವರು ಸೈಬರ್ ಕಳ್ಳನ ಟಾರ್ಚರ್ಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವತಿ.ರಾಘವೇಂದ್ರ ಒಂದು ವರ್ಷದಿಂದ, ತ್ರಿವೇಣಿಯ ಫೋಟೋ, ವಿಡಿಯೋಗಳನ್ನು ಬಳಸಿಕೊಂಡು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ ಎನ್ನಲಾಗಿದ್ದು,ತ್ರಿವೇಣಿಯ, ಸ್ನೇಹಿತರಿಗೆ ಸಂಬಂಧಿಕರಿಗೆ ಫೇಸ್ಬುಕ್ ಮೆಸೆಂಜರ್ನಲ್ಲಿ ಚಾಟ್ ಮಾಡಿ ಈ ಖದೀಮ ಹಣವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ. ಈ ವಿಚಾರ ತ್ರಿವೇಣಿ ಗಮನಕ್ಕೆ ಬಂದಾಗ, ಅವರ ಸ್ನೇಹಿತರ ಮೂಲಕ ಬೆಂಗಳೂರಿನಲ್ಲೇ ಕುಳಿತು ಯುವತಿಯ ಫೋಟೋ ದುರುಪಯೋಗಪಡಿಸಿಕೊಂಡು ಹಣ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಈತ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು,ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಈತನ ಖತರ್ನಾಕ್ ಐಡಿಯಾದ ಲಿಸ್ಟ್ ಇಲ್ಲಿಗೆ ಮುಗಿಯೋದಿಲ್ಲ.. ಎಂಟತ್ತು ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಇಲ್ಲಿಯವರೆಗೆ ಬರೋಬ್ಬರಿ 80 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆಯ ದೂರು ಪಡೆದು ಐಪಿಸಿ ಸೆಕ್ಷನ್ಗಳನ್ನು ಹಾಕದೇ ಕೇವಲ ಎನ್ಸಿಆರ್ ಮಾಡಿಕೊಂಡು, ಕಾಂಪ್ರಮೈಸ್ ಆಗಿ ಎಂದು ಸಂತ್ರಸ್ತ ಯುವತಿಗೆ ಪೊಲೀಸರು ಮನವೊಲಿಸುತ್ತಿದ್ದಾರೆ ಎನ್ನಲಾಗಿದೆ. ಯುವತಿಯರ ಫೋಟೋಗಳನ್ನ ಬಳಸಿಕೊಂಡು ರಾಘವೇಂದ್ರ ಬ್ಲಾಕ್ ಮೇಲ್ ಮಾಡುತ್ತಿದ್ದ. ವೇಶ್ಯಾವಾಟಿಕೆ ದಂಧೆಗೂ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದ. ಇಂತಹ ಖದೀಮನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೇ ಸಂತ್ರಸ್ತ ಯುವತಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೃತ್ಯವೆಸಗಿದ ರಾಘವೇಂದ್ರನ ಮೊಬೈಲ್ ಫೋನ್ ಪೊಲೀಸರು ವಶ ಪಡಿಸಿಕೊಂಡು ಪರಿಶೀಲನೆ ಮಾಡಿದಾಗ ನೂರಾರು ಯುವತಿಯರಿಗೆ ಚಾಟಿಂಗ್ ಮಾಡಿದ್ದು, ಹಣ ಹಾಕಿಸಿಕೊಂಡಿರುವುದು, ನಕಲಿ ಖಾತೆಗಳನ್ನು ಸೃಷ್ಟಿಸಿರೋದು ಪತ್ತೆಯಾಗಿದೆ. ಆದರೆ ಪೊಲೀಸರು ಮಾತ್ರ ಇವುಗಳನ್ನ ಡಿಲೀಟ್ ಮಾಡಿಸದೇ ಬೇಜವಾಬ್ದಾರಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.