ನ್ಯೂಸ್ ನಾಟೌಟ್ :ಕೆಲವರಿಗೆ ಪತ್ನಿ ಮೇಲೆ ವಿಶೇಷ ಪ್ರೀತಿ.ಪ್ರತಿ ಕ್ಷಣವನ್ನು ಕೂಡ ಪತ್ನಿ ಜತೆಗೆ ಹಂಚಿಕೊಂಡು ಖುಷಿ ಖುಷಿಯಲ್ಲಿರುತ್ತಾರೆ.ಇನ್ನೂ ಕೆಲವರು ಕೆಲಸದ ಒತ್ತಡದಿಂದಲೋ ಅಥವಾ ಆಸಕ್ತಿ ಇಲ್ಲದಿರುವುದರಿಂದಲೋ ಹುಟ್ಟು ಹಬ್ಬ , ಅಥವಾ ಆಕೆಯ ಅಸೆಗಳನ್ನು ಈಡೇರಿಸುವುದಕ್ಕೆ ಅಸಾಧ್ಯವಾಗಿಬಿಡುತ್ತೆ.ಕೆಲವರು ಗಂಡನ ಕಷ್ಟಗಳನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಇನ್ನೂ ಕೆಲವರು ತನ್ನ ಗಂಡ ಹೀಗೆಯೇ ಇರಬೇಕೆಂದು ಹಠ ಹಿಡಿಯುವವರೂ ಇದ್ದಾರೆ.ಅಂಥವರ ಸಾಲಿಗೆ ಇಲ್ಲೊಂದು ಮಹಿಳೆ ಸೇರಿಕೊಳ್ಳುತ್ತಾಳೆ.
ಹೌದು, ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ಗಂಡ ತನ್ನನ್ನು ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದನೆಂದು ಪತ್ನಿ ಪತಿಯ ಮೂಗಿಗೆ ಗುದ್ದಿರುವ ಘಟನೆ ವರದಿಯಾಗಿದೆ. ಇದರಿಂದ ಗಂಡ ದುರಂತ ಅಮತ್ಯವನ್ನೇ ಕಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ವನವಡಿ ಪ್ರದೇಶದ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ. ವ್ಯಕ್ತಿಯನ್ನು ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ನಿರ್ಮಾಣ ಉದ್ಯಮದಲ್ಲಿ ಇವರು ಉದ್ಯಮಿಯಾಗಿದ್ದರು. 6 ವರ್ಷಗಳ ಹಿಂದೆ ಪತ್ನಿ ರೇಣುಕಾ (38) ಅವರೊಂದಿಗೆ ನಿಖಿಲ್ ಖನ್ನಾ ಪ್ರೇಮ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ವನವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿದ್ದು, ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ, ಪ್ರಾಥಮಿಕ ತನಿಖೆಯ ಪ್ರಕಾರ, ನಿಖಿಲ್ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಆಚರಿಸಲು ದುಬೈಗೆ ರೇಣುಕಾ ಅವರನ್ನು ಕರೆದುಕೊಂಡು ಹೋಗದ ಕಾರಣ ದಂಪತಿ ಜಗಳವಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ, ಆಕೆಯ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆಗಳನ್ನು ನೀಡಲಿಲ್ಲ ಎಂದು ಪತ್ನಿ ಸಿಟ್ಟಾಗಿದ್ದಾರೆ. ಜತೆಗೆ ಕೆಲವು ಸಂಬಂಧಿಕರ ಹುಟ್ಟುಹಬ್ಬ ಆಚರಿಸಲು ದೆಹಲಿಗೆ ಹೋಗಬೇಕೆಂಬ ತನ್ನ ಆಸೆಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಕ್ಕಾಗಿಯೂ ರೇಣುಕಾ ನಿಖಿಲ್ನೊಂದಿಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.ಶುಕ್ರವಾರ ಜಗಳದ ವೇಳೆ ಪತ್ನಿ ರೇಣುಕಾ ಪತಿ ನಿಖಿಲ್ನ ಮುಖಕ್ಕೆ ಗುದ್ದಿದ್ದು, ಗುದ್ದಿದ ರಭಸಕ್ಕೆ ನಿಖಿಲ್ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದು ಹೋಗಿದೆ. ಅಲ್ಲದೆ, ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.