ನ್ಯೂಸ್ ನಾಟೌಟ್ : ಮದುವೆ ಮನೆಯಲ್ಲಿ ಕೆಲವೊಂದು ಸಣ್ಣ ವಿಚಾರಕ್ಕೆ ಗಲಾಟೆಗಳಾಗೋದ್ರ ಬಗ್ಗೆ ಕೇಳಿದ್ದೇವೆ.ಆದರೆ ಒಂದು ಸಣ್ಣ ವಿಚಾರದ ಗಲಾಟೆಯೇ ದೊಡ್ಡ ಮಟ್ಟಕ್ಕೆ ತಲುಪಿ ಆರು ಜನ ಗಂಭೀರ ಸ್ಥಿತಿಯಲ್ಲಿರುವ ಘಟನೆಯೊಂದು ವರದಿಯಾಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ವರದಿಯಾಗಿದ್ದು, ಆಗ್ರಾದ (Agra) ಮದುವೆ ಮನೆಯೊಂದರಲ್ಲಿ ರಸಗುಲ್ಲಾ (Rasgulla) ಕಡಿಮೆಯಾಗಿದೆ ಎನ್ನುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ.ಶಂಸಾಬಾದ್ ಪ್ರದೇಶದಲ್ಲಿ ಭಾನುವಾರ (ನವೆಂಬರ್ 19)ರ ರಾತ್ರಿ ಈ ಗಲಾಟೆ ನಡೆದಿದೆ.ಇದೀಗ ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ʼʼಘಟನೆಯಿಂದ ಆರು ಮಂದಿಗೆ ಗಾಯಗಳಾಗಿದ್ದು, ದೂರು ದಾಖಲಿಸಲಾಗಿದೆ” ಎಂದು ಶಂಸಾಬಾದ್ ಪೊಲೀಸ್ ಠಾಣೆಯ ಅನಿಲ್ ಶರ್ಮಾ ತಿಳಿಸಿದ್ದಾರೆ.
ಭಾನುವಾರ ಮದುವೆ ಸಮಾರಂಭವನ್ನು ಬ್ರಿಜ್ಭಾನ್ ಕುಶ್ವಾಹಾ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬರು ರಸಗುಲ್ಲಾ ಕೊರತೆ ಬಗ್ಗೆ ಕಾಮೆಂಟ್ ಮಾಡಿದ್ದರು. ಇದರಿಂದ ಮಾತಿನ ಚಕಮಕಿ ಆರಂಭವಾಯಿತು ಎಂದು ಅನಿಲ್ ಶರ್ಮಾ ಹೇಳಿದ್ದಾರೆ. ಗಲಾಟೆಯಲ್ಲಿ ಭಗವಾನ್ ದೇವಿ, ಯೋಗೇಶ್, ಮನೋಜ್, ಕೈಲಾಶ್, ಧರ್ಮೇಂದ್ರ ಮತ್ತು ಪವನ್ ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.ಮದುವೆ ಮನೆಯಲ್ಲಿ ಸಂಭ್ರಮದಿಂದ ತುಂಬಿ ತುಳುಕಾಡುತ್ತಾ ಇರಬೇಕಾಗಿದ್ದು,ಅದರ ಬದಲು ಅಲ್ಲಿ ಗಲಾಟೆಗಳಾಗಿ ಇತರರ ಮನಸ್ಸಿಗೂ ನೋವುಗಳಾಗೋದು ನಿಜಕ್ಕೂ ವಿಪರ್ಯಾಸದ ಸಂಗತಿ.