ನ್ಯೂಸ್ ನಾಟೌಟ್ :ಬಾಲಿವುಡ್ ಪ್ರಸಿದ್ಧ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಬಾಲ್ಯದ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಹಾಲಿವುಡ್ ಸಂದರ್ಶಕರ ಬಳಿ ಮಾತನಾಡಿದ ಅವರು ‘ನಾನು ಹದಿಹರೆಯದಲ್ಲಿ ಇದ್ದಾಗ ಕೆಲವು ಹುಡುಗರು ಫಾಲೋ ಮಾಡುತ್ತಿದ್ದರು.ಒಬ್ಬಾತ ನಮ್ಮ ಮನೆಯ ಬಾಲ್ಕನಿಗೆ ಹಾರಿ ಬಂದು ನನ್ನ ಡ್ರೆಸ್ಗಳನ್ನು ಕದ್ದುಕೊಂಡು ಹೋಗಿದ್ದ.ಅದನ್ನು ನೋಡಿ ನಮ್ಮಪ್ಪ ತುಂಬಾ ಕೂಗಾಡಿಬಿಟ್ಟಿದ್ದರು. ‘ಇನ್ನು ಮುಂದೆ ನೀನು ಭಾರತೀಯ ಡ್ರೆಸ್ಗಳನ್ನು ಮಾತ್ರ ಹಾಕಿಕೋ. ಮಾಡರ್ನ್ ಡ್ರೆಸ್ ಹಾಕುವುದರಿಂದಲೇ ಹುಡುಗರು ಹಾಗೆ ಆಡುತ್ತಿದ್ದಾರೆ, ನಿನ್ನ ಬಟ್ಟೆಗಳನ್ನು ಕೂಡ ಬಿಡುತ್ತಿಲ್ಲ ಎಂದಿದ್ದರು ಎಂದು ಹೇಳಿದ್ದಾರೆ.
ನನಗೆ ಚಿಕ್ಕಂದಿನಿಂದಲೂ ನನ್ನ ಬಗ್ಗೆ, ನನ್ನ ಲುಕ್ ಬಗ್ಗೆ ತುಂಬಾ ಕೀಳರಿಮೆ ಇತ್ತು. ಆದರೆ ನನ್ನ ಅಮ್ಮನಿಗೆ ನನ್ನ ಕೀಳರಿಮೆ ಸ್ವಭಾವದ ಬಗ್ಗೆ ತುಂಬಾ ಅಸಮಾಧಾನವಿತ್ತು. ನಾನು ಅದರಿಂದ ಹೊರಗೆ ಬರಲೇಬೇಕೆಂದು ಪಣತೊಟ್ಟ ನನ್ನ ಅಮ್ಮ ನನ್ನನ್ನು ಬ್ಯೂಟಿ ಪಾರ್ಲರಿಗೆ ಸೇರಿಸಿದ್ದರು. ಅಲ್ಲಿ ನನಗೆ ಹಲವು ಬ್ಯೂಟಿ ಟಿಪ್ಸ್ ಹೇಳಿಕೊಡಲಾಯಿತು. ನನಗೆ ಕಾಲಕ್ರಮೇಣ ನಾನು ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುವುದನ್ನು, ಚಿಂತಿಸುವುದನ್ನು ಬಿಟ್ಟುಬಿಟ್ಟೆ.
ಬಳಿಕ ನಾನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದುಕೊಂಡೆ. ನನಗೆ ನನ್ನ ಮುಖ ಹಾಗೂ ದೇಹದ ಬಗ್ಗೆ ಅಸಮಾಧಾನ ಹೊರಟೇಹೋಯ್ತು. ಅಷ್ಟೇ ಅಲ್ಲ, ನನಗೆ ನನ್ನ ವ್ಯಕ್ತಿತ್ವದ ಬಗ್ಗೆಯೂ ಹೆಮ್ಮೆ ಮೂಡಿತು. ಆ ಬಳಿಕ ನಾನು ಯಾವತ್ತೂ ನನ್ನ ಸೌಂದರ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಕೀಳಾಗಿ ಯೋಚಿಸಲೇ ಇಲ್ಲ. ನಾನು ನಾನಾಗಿರಲು, ನನ್ನ ಸೌಂದರ್ಯ ಹೇಗೇ ಇರಲಿ ಅದು ನನ್ನದು ಎಂಬ ಭಾವದಲ್ಲಿ ಬೆಳೆಯುತ್ತಾ ಹೋದೆ. ಅಂದಿನಿಂದ ಇಂದಿನವರೆಗೂ ನನಗೆ ನನ್ನ ಬಗ್ಗೆ ಯಾವುದೇ ಕೊರಗಿಲ್ಲ. ನಾನು ಏನಾಗಿದ್ದೆನೋ ಅದರ ಬಗ್ಗೆ ಹೆಮ್ಮೆಯಿದೆ, ಸಂತೋಷವಿದೆ, ಏನಾಗಿಲ್ಲವೋ ಆ ಬಗ್ಗೆ ಯಾವುದೇ ಬೇಸರವೂ ಇಲ್ಲ’ ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.