ನ್ಯೂಸ್ ನಾಟೌಟ್ : 11 ವರ್ಷ ದ ಬಾಲಕನೊಬ್ಬ ಕೊಲೆ ಆಗಿದ್ದಾನೆ ಎಂದು ಹಲವು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅದೇ ಬಾಲಕ ಶುಕ್ರವಾರ ಸುಪ್ರೀಂಕೋರ್ಟ್ (Supreme Court) ಮುಂದೆ ಹಾಜರಾಗಿ ತಾನು ಬದುಕಿದ್ದೇನೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಪೀಲಿಭೀತ್ನಲ್ಲಿ ನಡೆದಿದೆ.
ಆದರೆ ಕೊಲೆ ಆರೋಪ ಹೊತ್ತಿದ್ದ ಆತನ ಅಜ್ಜ ಹಾಗೂ ಮಾವಂದಿರು ಇದರಿಂದ ನಿರಾಳರಾಗಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಬಾಲಕನ ಹೆಸರು ಅಭಯ್ ಸಿಂಗ್ (Abhay Singh) ಎಂದು ಗುರುತಿಸಲಾಗಿದೆ. ಈತನ ತಂದೆಯ ಮನೆಯವರು ಅಭಯ್ನ ಅಮ್ಮನನ್ನು ವರದಕ್ಷಿಣೆಗಾಗಿ ಪೀಡಿಸಿ ಹೊಡೆಯುತ್ತಿದ್ದರು. ಹೀಗಾಗಿ ಈತ ತಂದೆ ಮನೆಯಲ್ಲಿರದೇ 2013ರಿಂದ ತಾಯಿಯ ತವರು ಮನೆಯಲ್ಲೇ ಅಜ್ಜ-ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.
ಇದರ ನಡುವೆ ಈತನ ತಾಯಿ ಕೆಲವು ವರ್ಷದ ಹಿಂದೆ ತೀರಿ ಹೋಗಿದ್ದರು. ಹೀಗಾಗಿ ತಾಯಿಯ ಮನೆ ಕಡೆಯವರು, ಅಭಯ್ನ ತಂದೆ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಅಭಯ್ ತಂದೆ ಕೊಲೆ ಕತೆ ಸೃಷ್ಟಿಸಿ, ಆತನ ಅಜ್ಜ ಹಾಗೂ ಸೋದರ ಮಾವಂದಿರ ವಿರುದ್ಧ ಕೊಲೆ ಕೇಸು ದಾಖಲಿಸಿದ್ದ ಎಂಬುದು ಬಯಲಾಗಿದೆ.
ಆದರೆ ಇದರ ವಿರುದ್ಧ ಬಾಲಕ ಹಲವು ಬಾರಿ ಕೆಳ ನ್ಯಾಯಾಲಯದಲ್ಲಿ ತಾನು ಬದುಕಿದ್ದೇನೆ. ತನ್ನ ಕೊಲೆ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಸಾಕ್ಷ್ಯಾಧಾರಗಳ ಕೊರತೆಯಿಂದ ಯಾವ ನ್ಯಾಯಾಲಯವೂ ಆತನ ವಾದ ಮನ್ನಿಸಿರಲಿಲ್ಲ. ಹೀಗಾಗಿ ಬಾಲಕ ಸುಪ್ರೀಂ ಮೊರೆ ಹೋಗಿದ್ದ ಎಂದು ವರದಿ ತಿಳಿಸಿದೆ.