ನ್ಯೂಸ್ ನಾಟೌಟ್ : ಸುಳ್ಯದ ಖ್ಯಾತ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ ಹಾಗೂ ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 5 ವರ್ಷಗಳ ಹಿಂದೆ ರಾಜೇಶ್ ಅವರನ್ನು ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮುಗಿಸಿದ್ದರು. ಪತಿ ರಾಜೇಶ್ ಎಂಬವರು ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದು,ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣ್ಯ, ಅವರ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮಾತ್ರವಲ್ಲ,ಅವರೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಆದರೆ ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಕಲಹ ಇತ್ತು ಎಂಬ ವಿಚಾರ ತಿಳಿದು ಬಂದಿದೆ.
ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಾಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.ಐಶ್ವರ್ಯಾ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದರು ಎಂದು ಹೇಳಲಾಗಿದೆ.ಈ ಎಲ್ಲಾ ಘಟನೆಗಳಿಂದ ಮನನೊಂದ ಐಶ್ವರ್ಯಾ,20 ದಿನಗಳ ಹಿಂದೆ ತವರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅ. 26 ರಂದು ಮನನೊಂದು ಡೆತ್ ನೋಟ್ ಬರೆದು ಐಶ್ವರ್ಯ ಬಾರದ ಲೋಕಕ್ಕೆ ತೆರಳಿದ್ದರು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ತಂದೆಯ ಅಕ್ಕ ಗೀತಾ, ಅವರ ಪತಿ ರವೀಂದ್ರನಾಥ, ಲಿಪಿ, ತಂದೆಯ ತಮ್ಮ ಓಂಪ್ರಕಾಶ್, ಅವರ ಪತ್ನಿ ಶಾಲಿನಿ ಯವರುಗಳ ಮೇಲೆ ಕೇಸು ದಾಖಲಾಗಿತ್ತು.ಅದರಂತೆ ಇದೀಗ ಬೆಂಗಳೂರು ಪೋಲಿಸರು ಐವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಐಶ್ವರ್ಯ, ಸುಳ್ಯದ ಉಬರಡ್ಕ ಮಿತ್ತೂರಿನವರಾದ ಎಂ.ಎಸ್.ಸುಬ್ರಹ್ಮಣ್ಯ ಮದುವೆಗದ್ದೆ ಹಾಗೂ ಉಷಾ ದಂಪತಿಯ ಪುತ್ರಿಯಾಗಿದ್ದು,ಐಶ್ವರ್ಯ ಪೋಷಕರು ಇತ್ತೀಚೆಗೆ ನೋವಿನಲ್ಲೂ ಐಶ್ವರ್ಯ ಅವರ ಕಣ್ಣುಗಳನ್ನು ದಾನ ಮಾಡಿದ್ದರು.