ನ್ಯೂಸ್ ನಾಟೌಟ್: ಕರಾವಳಿಯ ಹಿಂದೂ ಕಾರ್ಯಕರ್ತರ ವಿರುದ್ದ ಮತ್ತೆ ಗಡಿಪಾರು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ದ.ಕ ಜಿಲ್ಲೆಯ ಐವರು ಭಜರಂಗದಳ ಕಾರ್ಯಕರ್ತರಿಗೆ ನ.16ರಂದು ನೊಟೀಸ್ ತಲುಪಿದ್ದು, ನವೆಂಬರ್ 10ಕ್ಕೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ. ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಿಗೆ ಈ ನೋಟಿಸ್ ನೀಡಲಾಗಿದ್ದು, ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಕಳುಹಿಸಲಾಗಿದೆ.
ಆರೋಪಿಗಳನ್ನು ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರೆದುರು ಹಾಜರಾಗಲು ಖಡಕ್ ಆದೇಶ ನೀಡಿದ್ದು, ಭಜರಂಗದಳ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟಿಸ್ ನೀಡಲಾಗಿದೆಯೆಂದು ವರದಿ ತಿಳಿಸಿದೆ. ಭಜರಂಗದಳದಲ್ಲಿ ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿದ್ದ ದಿನೇಶ್, ಪ್ರಜ್ವಲ್ ಮತ್ತು ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲತೇಶ್ ಗುಂಡ್ಯ ಹಾಗು ಉಳಿದ ಇಬ್ಬರು ಕಾರ್ಯಕರ್ತರಾದ ನಿಶಾಂತ್ ಮತ್ತು ಪ್ರದೀಪ್ ವಿರುದ್ದವೂ ಗಡಿಪಾರು ಅಸ್ತ್ರ ಪ್ರಯೋಗಿಸಲಾಗಿದೆ. ಈ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ವರ ಮೇಲೆ ಒಂದೊಂದೇ ಪ್ರಕರಣಗಳಿರುವುದು ಎಂದು ತಿಳಿದುಬಂದಿದೆ. ಜೊತೆಗೆ ಕೋಮು ಗಲಭೆ, ದನಸಾಗಾಟ ಹ* ಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿ ಆರೋಪಗಳು ಇವರ ಮೇಲಿವೆ ಎನ್ನಲಾಗಿದೆ. ಸ್ಥಳೀಯ ಠಾಣೆಗಳ ಇನ್ಸ್ಪೆಕ್ಟರ್ ಗಳಿಂದ ಗಡಿಪಾರಿಗೆ ವರದಿ ಸಿದ್ದ ಪಡಿಸಲಾಗುತ್ತಿದ್ದು, ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡಿಪಾರಿಗೆ ಮನವಿ ಮಾಡಲಾಗಿದ್ದು, ಹೀಗಾಗಿ ಲತೇಶ್ ಗೆ ಬಳ್ಳಾರಿ ಜಿಲ್ಲೆಗೆ ಗಡಿಪಾರು ಹಾಗೂ ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಮನವಿ ಮಾಡಲಾಗಿದೆ. ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡಿಪಾರು ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆಯೂ ಇಂತಹ ಗಡಿಪಾರು ಆದೇಶವಾದಾಗ ಭಜರಂಗದಳ ಕೋರ್ಟ್ ಮೆಟ್ಟಿಲೇರಿ ತಡೆ ತಂದಿತ್ತು ಎಂದು ವರದಿ ತಿಳಿಸಿದೆ.