ನ್ಯೂಸ್ ನಾಟೌಟ್: ಭಕ್ತರ ಪಾಲಿನ ಭಾಗೀರಥಿ ಶ್ರೀ ಕ್ಷೇತ್ರ ಪೆರುವಾಜೆಯ ಜಲದುರ್ಗಾದೇವಿ ದೇವಾಲಯದಲ್ಲಿ ನೂರು ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದೆ. ಇದೀಗ ಆ ರಥ ಸಮರ್ಪಣೆಗೆ ದಿನಗಣನೆ ಆರಂಭವಾಗಿದೆ.
ಜನವರಿ 16 ರಿಂದ 21ರ ತನಕ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದೀಗ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಾನುವಾರ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು, ಇದೊಂದು ಅವಿಸ್ಮರಣೀಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಕ್ತರೆಲ್ಲರು ಕೂಡ ಪೂರ್ಣ ಪ್ರಮಾಣದಲ್ಲಿ ಬಂದು ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಜ.15ರಂದು ಸಂಜೆ ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ಉದ್ಭವ ಗಣಪತಿಗೆ ಮೂಡಪ್ಪ ಸೇವೆ, ಜಲದುರ್ಗಾದೇವಿಗೆ ದೊಡ್ಡ ರಂಗ ಪೂಜೆಯು ನೆರವೇರಲಿದೆ. ಜನವರಿ16ಕ್ಕೆ ಬೆಳಗ್ಗೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ಧಿ ಕಲಶ, ಶ್ರೀದೇವರಿಗೆ ಬ್ರಹ್ಮರಥ ಸಮರ್ಪಣೆ, ಪಲ್ಲಕ್ಕಿ ಸಮರ್ಪಣೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಲಾಗಿದೆ.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಈ ವರ್ಷದ ಜಾತ್ರೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಜನವರಿ 17ರಂದು ಶ್ರೀದೇವರ ಪೇಟೆ ಸವಾರಿ, ಜನವರಿ 18ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜನವರಿ 19ರಂದು ರಾತ್ರಿ ಪಲ್ಲಕ್ಕಿ ಉತ್ಸವ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ ನಡೆದು ಬಳಿಕ ಪಿಲಿಭೂತದ ಭಂಡಾರ ಬರಲಿದೆ. ಅದಾದ ನಂತರ ದೈವ -ದೇವರ ಮುಖಾಮುಖಿ ನಡೆಯಲಿದೆ. ನಂತರ ರಥಬೀದಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಾತ್ರೆಗೂ ಮೊದಲು ಡಿಸೆಂಬರ್ 14ರಂದು ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸೇರುವಂತೆ ವಿನಂತಿಸಲಾಗಿದೆ.ಪೆರುವಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ, ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ವೆಂಕಪ್ಪ ಗೌಡ, ಜಗದೀಶ್ ರೈ ಪೆರುವಾಜೆ, ಮೊದಲಾದವರು ಸಲಹೆ ಸೂಚನೆ ನೀಡಿದರು. ಉಳಿದಂತೆ ಪ್ರಧಾನ ಅರ್ಚಕ ಶ್ರೀನಿವಾಸ್ ಹೆಬ್ಬಾರ್, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ್ ಪೂಜಾರಿ ಮುಕ್ಕೂರು, ಅಮರನಾಥ ಶೆಟ್ಟಿ ಪೆರುವಾಜೆ ಗುತ್ತು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ಪಿ.ಜಗನ್ನಾಥ್ ರೈ, ದಾಮೋದರ ನಾಯ್ಕ್ , ಭಾಗ್ಯ ಲಕ್ಷ್ಮೀ ಅರ್ನಾಡಿ, ಯಶೋಧಾ ಎ.ಎಸ್ , ಮಾಜಿ ಸದಸ್ಯ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ನಾರಾಯಣ ಕೊಂಡೆಪ್ಪಾಡಿ, ಮಾಜಿ ಆಡಳಿತಾಧಿಕಾರಿ ಪದ್ಮನಾಭ ನೆಟ್ಟಾರು ಮೊದಲಾದವರಿದ್ದರು.