ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಪಾನ್ ಪರಾಗ್, ಗುಟ್ಕಾ ತಿನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ದುಶ್ಚಟಗಳಿಂದ ದೂರವಿರಿ ಎಂದು ಆದಿದ್ರಾವಿಡ ಸಮ್ಮೇಳನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಕರೆ ನೀಡಿದ್ದಾರೆ.
ಆದಿದ್ರಾವಿಡ ಯುವ ವೇದಿಕೆ (ರಿ.) ದ.ಕ. ಜಿಲ್ಲೆ ಹಾಗೂ ಸುಳ್ಯ ತಾಲೂಕು ಸಮಿತಿ ಆಶ್ರಯದಲ್ಲಿ ಆದಿದ್ರಾವಿಡ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದ ಅವರು, “ನಾವು ಬೆಳೆಯಬೇಕು, ಇನ್ನೊಬ್ಬರನ್ನು ಬೆಳೆಸಬೇಕು ಅನ್ನುವ ಗುಣ ನಮ್ಮಲ್ಲಿ ಇರಬೇಕು. ಹಾಗಿರಬೇಕಾದರೆ ನಮ್ಮಲ್ಲಿ ಒಂದಷ್ಟು ಒಳ್ಳೆಯ ಗುಣ ಇರಬೇಕು. ಮಾದರಿಯಾಗಿರುವ ಗುಣ ನಡತೆ ಇರಬೇಕು. ಕುಡಿತ ಮಾತ್ರ ದುಶ್ಚಟವಲ್ಲ. ಗುಟ್ಕಾ ಸೇವನೆಯಂತಹದ್ದು ಕೂಡ ಮಾರಕ. ಜೀವ-ಜೀವನವನ್ನೇ ಹಾಳು ಮಾಡುವ ಇಂತಹ ಚಟಗಳಿಂದ ದೂರವಿರಬೇಕು. ಗುಟ್ಕಾ ಪ್ಯಾಕೇಟ್ ಹಿಂದೆಯೇ ಇದನ್ನು ತಿಂದರೆ ಬಾಯಿ ಹಾಳಾಗುತ್ತದೆ. ಕ್ಯಾನ್ಸರ್ ಬರುತ್ತದೆ ಎಂದು ಬರೆದಿರುತ್ತಾರೆ. ಗೊತ್ತಿದ್ದೂ ಅದನ್ನೇ ತಿನ್ನುತ್ತಾರೆ. ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಬೇಕು. ಗಂಜಿ, ಚಟ್ನಿ ಆದರೂ ಪರವಾಗಿಲ್ಲ. ಉತ್ತಮ ಆಹಾರ ಸೇವನೆಯ ಅಗತ್ಯ ಇದೆ ಎಂದು ಭಾಗೀರಥಿ ಮುರುಳ್ಯ ತಿಳಿಸಿದರು.