ಅಹ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7ವಿಕೆಟ್ ಗಳ ಹೀನಾಯ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಚ್ರೇಲಿಯಾ ತಂಡ ಟ್ರಾವಿಸ್ ಹೆಡ್ ಶತಕ ಮತ್ತು ಲಬುಶೇನ್ ರ ಅರ್ಧಶತಕದ ನೆರವಿನಿಂದ ಗುರಿ ತಲುಪಿ ಜಯಭೇರಿ ಭಾರಿಸಿತು. ಆ ಮೂಲಕ 6ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೇವಲ 47 ರನ್ ಗಳಿಗೆ ತನ್ನ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಆಸರೆಯಾಗಿ ನಿಂತರು. ಅವರಿಗೆ ಲಬುಶೇನ್ ಅತ್ಯುತ್ತಮ ಸಾಥ್ ನೀಡಿದರು. 120 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 15 ಬೌಂಡರಿ ನೆರವಿನಿಂದ ಹೆಡ್ 137 ರನ್ ಗಳಿಸಿ ಸಿರಾಜ್ ಬೌಲಿಂಗ್ ನಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ಶಮಿ 1 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಹೊರತುಪಡಿಸಿ ಉಳಿದವರ ಬ್ಯಾಟ್ನಿಂದ ರನ್ ಬರಲಿಲ್ಲ. ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (4) ಐದನೇ ಓವರ್ನಲ್ಲೇ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ ಕೇವಲ 31 ಎಸೆತಗಳಲ್ಲಿ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್ ಕೈಚೆಲ್ಲಿದರು.
ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶ್ರೇಯಸ್ ಅಯ್ಯರ್ಗೆ (4) ಪ್ಯಾಟ್ ಕಮಿನ್ಸ್ ಪೆವಿಲಿಯನ್ ದಾರಿ ತೋರಿದರು. ತಂಡದ ಮೊತ್ತ 3 ವಿಕೆಟ್ಗೆ 81 ರನ್ ಆಗಿದ್ದಾಗ ಜೊತೆಯಾದ ಕೊಹ್ಲಿ ಮತ್ತು ರಾಹುಲ್, ನಾಲ್ಕನೇ ವಿಕೆಟ್ಗೆ 67 ರನ್ ಕೂಡಿಸಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ 29ನೇ ಓವರ್ನಲ್ಲಿ ಅದೃಷ್ಟ ಕೈಕೊಟ್ಟಿತು. ಪ್ಯಾಟ್ ಕಮಿನ್ಸ್ ಎಸೆದ ಈ ಓವರ್ನ ಮೂರನೇ ಎಸೆತನಲ್ಲಿ ಚೆಂಡು ಬ್ಯಾಟ್ಗೆ ತಾಗಿ, ವಿಕೆಟ್ಗೆ ಬಡಿಯಿತು. 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ಕೊಹ್ಲಿ ಇನಿಂಗ್ಸ್ಗೆ ಇದರೊಂದಿಗೆ ತೆರೆ ಬಿದ್ದಿತು.
107 ಎಸೆತಗಳಲ್ಲಿ 66 ರನ್ ಗಳಿಸಿ ಇನಿಂಗ್ಸ್ ಬೆಳೆಸುವ ಹೊಣೆ ಹೊತ್ತಿದ್ದ ರಾಹುಲ್, ಸ್ಟಾರ್ಕ್ ಬೌಲಿಂಗ್ನಲ್ಲೇ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ಗೆ ಕ್ಯಾಚಿತ್ತು ನಿರ್ಗಮಿಸಿದರು. ರವೀಂದ್ರ ಜಡೇಜ (9), ಸೂರ್ಯಕುಮಾರ್ ಯಾದವ್ (18) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನಿಂಗ್ಸ್ ಕೊನೇ ಎಸೆತದಲ್ಲಿ ರನೌಟ್ ಆದ ಕುಲದೀಪ್ ಯಾದವ್ (10), ಮೊಹಮ್ಮದ್ ಸಿರಾಜ್ ಜೊತೆಗೂಡಿ ತಂಡದ ಮೊತ್ತವನ್ನು 240ಕ್ಕೇರಿಸಿದರು.
ಟ್ರಾವಿಸ್–ಮಾರ್ನಸ್ ಭರ್ಜರಿ ಬ್ಯಾಟಿಂಗ್
ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿಗಳಾದ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು. ಹೀಗಾಗಿ ತಂಡದ ಮೊತ್ತ 47 ರನ್ ಆಗುವಷ್ಟರಲ್ಲಿ ಡೇವಿಡ್ ವಾರ್ನರ್ (7), ಮಿಚೇಲ್ ಮಾರ್ಷ್ (15) ಹಾಗೂ ಸ್ಟೀವ್ ಸ್ಮಿತ್ (4) ವಿಕೆಟ್ ಔಟಾದರು.
ಈ ಹಂತದಲ್ಲಿ ಜೊತೆಯಾದ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಷೇನ್, ಭಾರತದ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಲಾಬುಷೇನ್ ರಕ್ಷಣಾತ್ಮಕವಾಗಿ ಆಡಿದರೆ ಟ್ರಾವಿಸ್ ಎಂದಿನಂತೆ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಈ ಇಬ್ಬರು ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 192 ರನ್ ಗಳಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.