ನ್ಯೂಸ್ ನಾಟೌಟ್: ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ಸ್ಥಾಪಕ ಅಕ್ಷಯ್ ಕಲ್ಲೇಗ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಂಗ್ರೆಸ್ ಮುಖಂಡನ ಬಂಧನವಾಗಿದೆ. ಒಟ್ಟಾರೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ನಗರ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ , ಮನಿಷ್ , ಚೇತನ್ ಮತ್ತು ಮಂಜುನಾಥ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಮತ್ತೊಂದು ಕಡೆ ಅಕ್ಷಯ್ ಮನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ನಿನ್ನೆ ರಾತ್ರಿ ಪುತ್ತೂರಿನ ನೆಹರೂ ನಗರದಲ್ಲಿ ಕೊಲೆ ನಡೆದಿತ್ತು. ಪೂರ್ವ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದಾರೆ. ಘಟನೆಯ ಹಿಂದೆ ಕಾನೂನು ಸುವ್ಯವಸ್ಥೆಯ ವೈಫಲ್ಯವಿಲ್ಲ. ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಕೊಲೆಯಿದು, ಪುತ್ತೂರಿನಲ್ಲಿ ಇಂಥ ಘಟನೆ ನಡೆಯಲು ಬಿಡುವುದಿಲ್ಲ, ರಾತ್ರಿ ವೇಳೆಯಲ್ಲಿ ಗುಂಪು ಸೇರುವುದನ್ನು ನಿಯಂತ್ರಿಸಲು ಕ್ರಮ, ಈ ಬಗ್ಗೆ ಪೋಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಮೃತ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಮಾಜಿ ಶಾಸಕ ಸಂಜೀವ ಮಠಂದೂರು, ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಪುತ್ತೂರಿನಲ್ಲಿ ಎರಡು ಬಲಿಯಾಗಿದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೋಲೀಸ್ ವೈಫಲ್ಯವೇ ಈ ಘಟನೆಗೆ ಕಾರಣ. ಅಕ್ಷಯ್ ಅವರದ್ದು ಅತ್ಯಂತ ಬಡ ಕುಟುಂಬ, ಸರಕಾರ ಅಕ್ಷಯ್ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಸಂಜೀವ ಮಠಂದೂರು ಒತ್ತಾಯ ಮಾಡಿದ್ದಾರೆ.
ಸ್ನೇಹಿತನ ಪರವಾಗಿ ನಿಂತಿದ್ದ ಅಕ್ಷಯ್
ಕೊಲೆ ನಡೆದ ಪ್ರಕರಣದ ಬೆನ್ನಲ್ಲೇ ಅಕ್ಷಯ್ ಸ್ನೇಹಿತ ವಿಖ್ಯಾತ್ ದೂರು ನೀಡಿದ್ದಾರೆ. ಈ ಪ್ರಕಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದ ವಾಕ್ಸಮರವೇ ಕೊಲೆಯಲ್ಲಿ ಅಂತ್ಯವಾಗಿದೆ. ದೂರುದಾರ ವಿಖ್ಯಾತ್ ಹಾಗೂ ಆರೋಪಿ ಚೇತನ್ ಚಲಾಯಿಸುತ್ತಿದ್ದ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ.
ಈ ವಿಚಾರದಲ್ಲಿ ಅಕ್ಷಯ್ ಹಾಗೂ ಆರೋಪಿಗಳಾದ ಮನೀಶ್, ಚೇತನ್ ಜೊತೆ ಫೋನ್ ಮೂಲಕ ಮಾತಿನ ಚಕಮಕಿ ನಡೆದಿತ್ತು. ಚಕಮಕಿ ಬಳಿಕ ರಾತ್ರಿ ವೇಳೆ ಕಾರಿನಲ್ಲಿ ನೆಹರು ನಗರಕ್ಕೆ ನಾಲ್ವರು ಆರೋಪಿಗಳು ಬಂದಿದ್ದರು. ರಾತ್ರಿ ವೇಳೆ ನೆಹರುನಗರದ ಎಟಿಎಂ ಬಳಿ ನಿಂತಿದ್ದ ಅಕ್ಷಯ್ ಹಾಗೂ ವಿಖ್ಯಾತ್ ಬಳಿ ಮತ್ತೆ ತಕರಾರು ತೆಗೆದು ಜಗಳ ಆರಂಭಿಸಿದ್ದಾರೆ.
ತಾವು ತಂದಿದ್ದ ಎರಡು ತಲಾವಾರು ಮೂಲಕ ಅಕ್ಷಯ್ ಗೆ ಹಲ್ಲೆ ನಡೆಸಿದ ಆರೋಪಿಗಳು ಈ ಸಂದರ್ಭ ಅಕ್ಷಯ್ ಸ್ನೇಹಿತ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.