ನ್ಯೂಸ್ ನಾಟೌಟ್ : ಸಿಖ್ ಸಮುದಾಯದ ಜನರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು, ಏಕೆಂದರೆ ಅವರ ಜೀವ ಅಪಾಯಕ್ಕೆ ಸಿಲುಕಬಹುದು ಎಂದು ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಎಚ್ಚರಿಕೆ ನೀಡಿದ್ದಾನೆ.
ನವೆಂಬರ್ 19ರ ನಂತರ ಏರ್ ಇಂಡಿಯಾ ಕಾರ್ಯಾಚರಣೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಆತ ಹೇಳಿದ್ದಾನೆ. ”ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನ ಏರಿದರೆ ನೀವು ಮರಳಿ ಭೂಮಿಗೆ ಬರುವುದಿಲ್ಲ. ನಿಮ್ಮ ಜೀವಕ್ಕೆ ಖಾತರಿ ಇರುವುದಿಲ್ಲ,” ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ವಿಮಾನ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪನ್ನು ಬಿಡುಗಡೆ ಮಾಡಿರುವ ವಿಡಿಯೋ ಹರಿದಾಡುತ್ತಿದ್ದು, ನ 19 ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) ಬಂದ್ ಆಗಿರಲಿದೆ, ಮತ್ತು ವಿಮಾನ ನಿಲ್ದಾಣದ ಹೆಸರನ್ನು ಬದಲಿಸಲಾಗುತ್ತದೆ. ಅದೇ ದಿನ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ ಎಂದು ಆತ ಹೇಳಿದ್ದಾನೆ.ಸಿಖ್ ಸಮುದಾಯದ ಜನತೆ ನ 19 ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬಾರದು.
ಅಂದು ಇಡೀ ಜಗತ್ತಿನ ವಿಮಾನ ನಿಲ್ದಾಣಗಳನ್ನು ಬಂದ್ ಮಾಡುತ್ತೇವೆ. ಆಗಸದಲ್ಲಿ ವಿಮಾನ ಹಾರುವಾಗ ಏನು ಬೇಕಾದರೂ ಆಗಬಹುದು. ಜೀವ ಮುಖ್ಯವೋ ಅಥವಾ ಏರ್ ಇಂಡಿಯಾ ವಿಮಾನ ಮುಖ್ಯವೋ ನೀವೆ ಯೋಚಿಸಿ ಮುಂದುವರಿಯಿರಿ,” ಎಂದು ವಿಡಿಯೊದಲ್ಲಿ ಹೇಳಿದ್ದಾನೆ ಎನ್ನಲಾಗಿದೆ.ಅ 10 ರಂದು ಇದೇ ರೀತಿಯ ವಿಡಿಯೋ ಬಿಡುಗಡೆ ಮಾಡಿದ್ದ ಪನ್ನು, ಸಿಖ್ಖರ ಭೂಮಿ ಪಂಜಾಬ್ ಪ್ರದೇಶದ ಮೇಲೆ ಹಿಡಿತ ಹೊಂದಿರುವ ಕೇಂದ್ರ ಸರಕಾರಕ್ಕೆ ಹಮಾಸ್ ಉಗ್ರರ ಮಾದರಿಯಲ್ಲಿ ಉತ್ತರ ಕೊಡುವುದಾಗಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ವಿಚಾರದಲ್ಲಿ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದಾಗ, ಕೆನಡಾದಲ್ಲಿರುವ ಹಿಂದೂಗಳು ದೇಶ ತೊರೆಯುವಂತೆ ಒತ್ತಾಯಿಸಿದ್ದ. ಖಲಿಸ್ತಾನ್ ಪರ ಸಿಖ್ಖರು ಕೆನಡಾಕ್ಕೆ ನಿರಂತರವಾಗಿ ತಮ್ಮ ನಿಷ್ಠೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಿಂದೂಗಳು ಕೆನಡಾದಿಂದ ಹೊರಹೋಗಲಿ ಎಂದು ಆತ ಸೆಪ್ಟೆಂಬರ್ನಲ್ಲಿ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.