ನ್ಯೂಸ್ ನಾಟೌಟ್: 81.5 ಕೋಟಿ ಮಂದಿಯ ಭಾರತೀಯರ ಆಧಾರ್ ಮಾಹಿತಿಗಳು ಡಾರ್ಕ್ ವೆಬ್ ನಲ್ಲಿ ಮರಾಟಕ್ಕಿದೆ ಎನ್ನುವ ಆತಂಕಕಾರಿ ಅಂಶವನ್ನು ಅಮೆರಿಕ ಮೂಲದ ಸೈಬರ್ ಭದ್ರತೆ ಸಂಸ್ಥೆ ರಿಸೆಕ್ಯುರಿಟಿ ಬಹಿರಂಗಪಡಿಸಿದೆ. ಇದು ದತ್ತಾಂಶ ಸೋರಿಕೆಯ ಗಂಭೀರ ಪ್ರಕರಣವಾಗಿದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ವೈಯಕ್ತಿಕವಾಗಿ ಮಾಹಿತಿಗಳಾದ ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸ ಸೇರಿದಂತೆ ಆಧಾರ್ ಮತ್ತು ಪಾಸ್ಪೋರ್ಟ್ ನ ಸೂಕ್ಷ್ಮ ಮಾಹಿತಿಗಳು ಆನ್ಲೈನ್ ನಲ್ಲಿ ಮಾರಾಟಕ್ಕಿವೆ ಎಂದು ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ.
ಇದರ ಜೊತೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ ಇದ್ದು, ಇವು ಸೂಕ್ಷ್ಮ ಸ್ವರೂಪದ ಮಾಹಿತಿಗಳು ಎನ್ನಲಾಗಿದೆ. ಐಸಿಎಂಆರ್ ಗೆ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.
ರಿಸೆಕ್ಯುರಿಟಿ ವೆಬ್ಸೈಟ್ ನ ಪ್ರಕಾರ ಅಕ್ಟೋಬರ್ 9ರಂದು “pwn0001” ಎಂಬ ವೈಯಕ್ತಿಕ ಬಳಕೆದಾರ ಬ್ರೀಚ್ ಫೋರಂಸ್ ಎಂಬ ವೇದಿಕೆಯಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿದ್ದು, 815 ದಶಲಕ್ಷ ಮಂದಿ ಭಾರತೀಯರ ಆಧಾರ್ ಮತ್ತು ಪಾಸ್ಪೋರ್ಟ್ ಮಾಹಿತಿಗಳನ್ನು ಒಳಗೊಂಡ ದಾಖಲೆಗಳು ಲಭ್ಯ ಇವೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.