ನ್ಯೂಸ್ ನಾಟೌಟ್ : ಬಾಲಿವುಡ್ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಹರಿಯಲಾರಂಭಿಸಿದೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.ಮೂಲಗಳ ಪ್ರಕಾರ, ಮಾಧುರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಈ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೌದು..ಈ ಅನುಮಾನ ಮೂಡಿದ್ದು, ಮೊನ್ನೆ ನಡೆದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ. ಈ ಸಂದರ್ಭ ನಟಿ ಮಾಧುರಿ ದೀಕ್ಷಿತ್ ಮೈದಾನದಲ್ಲಿದ್ದರು. ಇದೇ ವೇಳೆ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಕಾಣಿಸಿಕೊಂಡರು. ಅವರೊಂದಿಗೆ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡ ಇದ್ದರು. ಅಷ್ಟೇ ಅಲ್ಲ, ಬಿಜೆಪಿ ಮುಖಂಡ ಆಶಿಶ್ ಶೇಲಾರ್ ಕೂಡ ಅಲ್ಲಿದ್ದರು. ಇದಾದ ನಂತರ ಮಾಧುರಿ ದೀಕ್ಷಿತ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿ ಬಂದವು.ಹಾಗಾದರೆ ಮಾಧುರಿ ದೀಕ್ಷಿತ್ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.ಮಾಧುರಿ ವಾಯುವ್ಯ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಆದರೆ, ಈ ಸ್ಥಾನ ಶಿವಸೇನೆ ಪಾಲಾಗಿದ್ದು,ಶಿಂಧೆ ಗುಂಪಿಗೆ ಸೇರಿದ ಗಜಾನನ ಕೀರ್ತಿಕರ್ ಇಲ್ಲಿಂದ ಸಂಸದರಾಗಿದ್ದಾರೆ.ಆದರೆ, ಈ ಬಾರಿಯೂ ಅವರ ಸ್ಥಿತಿ ಚೆನ್ನಾಗಿಲ್ಲ.ಇದೇ ಮಾಧುರಿಗೆ ವರದಾನವಾಗಲಿದೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ, ಬಿಜೆಪಿ ಈ ಕ್ಷೇತ್ರದಲ್ಲಿ ಮಾಧುರಿ ದೀಕ್ಷಿತ್ ಅವರನ್ನು ಕಣಕ್ಕಿಳಿಸಬಹುದು.ಈ ಬಾರಿಯೂ ಕಾಂಗ್ರೆಸ್ನಿಂದ ಸಂಜಯ್ ನಿರುಪಮ್ ಎಂ.ಪಿ. ಟಿಕೆಟ್ ಆಕಾಂಕ್ಷಿಯಾಗಿದ್ದು, ಸದ್ಯ ಕಾಂಗ್ರೆಸ್ ನಾಯಕ, ಸಂಸದ ಕೀರ್ತಿಕರ್ ವಿರುದ್ಧ ತಿರುಗಿಬಿಳುವ ಸಂಭವವಿದೆ. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಮಾಧುರಿ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.