ನ್ಯೂಸ್ ನಾಟೌಟ್ :ಮಡಿಕೇರಿ ತಾಲ್ಲೂಕು ಹೊದ್ದೂರು ಬಳಿಯ ಪಾಲೆಮಾಡು ಗ್ರಾಮದ ಕಾನ್ಸಿರಾಮ್ ನಗರ ನಿವಾಸಿಗಳ ಕುಂದುಕೊರತೆ ಸಭೆ ನಡೆಸಿ ಶಾಸಕ ಮಂತರ್ ಗೌಡ ಮಾತನಾಡಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆಮಾಡು ಕಾನ್ಸಿರಾಮ್ ನಗರ ನಿವಾಸಿಗಳ 90 ಕುಟುಂಬಗಳಿಗೆ ಹೊಸ ವರ್ಷದ ವೇಳೆಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕರು,ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡು ಬಳಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದ್ದು,ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪಾಲೆಮಾಡು ಕಾನ್ಸಿರಾಮ್ ನಗರದಲ್ಲಿ ವಾಸಿಸುತ್ತಿರುವ ಎಲ್ಲಾ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು .ಇದಲ್ಲದೇ ಇಲ್ಲಿನ ರಸ್ತೆ ಅಗಲೀಕರಣ, ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು, ಬಸ್ ಸೌಕರ್ಯ ಜೊತೆಗೆ ನ್ಯಾಯ ಬೆಲೆ ಅಂಗಡಿ ಕಲ್ಪಿಸುವುದು ಹೀಗೆ ಹಲವು ಮೂಲಭೂತ ಸೌಕರ್ಯವನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಶಾಸಕರು ಹೇಳಿದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಇಲ್ಲಿನ ಪಾಲೆಮಾಡು ನಿವಾಸಿಗಳಿಗೆ ಹಕ್ಕುಪತ್ರ ಕಲ್ಪಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿ ಕಾನೂನು ಪ್ರಕಾರ 90 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು.ಇಲ್ಲಿನ 34 ಕುಟುಂಬಗಳಿಗೆ 94ಸಿ ಅಡಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.