ನ್ಯೂಸ್ ನಾಟೌಟ್ : ವಯಸ್ಸು ಮೂವತ್ತು ಆದ್ರೆ ಸಾಕು.ಮದುವೆಯಾಗಿದೆಯಾ? ಇನ್ನೂ ಮದುವೆಯಾಗಿಲ್ವ? ಅನ್ನೋ ಪ್ರಶ್ನೆಗಳನ್ನು ಕೇಳೋದಕ್ಕೆ ಜನ ಶುರು ಮಾಡುತ್ತಾರೆ. ಆದರೆ ಈ ಪ್ರದೇಶದ ಮೂವತ್ತು ಯುವಕರು ನೋಡೋದಕ್ಕೆ ಸುಂದರವಾಗಿದ್ದರೂ , ಕೆಲಸವಿದ್ದರೂ ಕೂಡ ಯಾರು ಹುಡುಗಿ ಕೊಡೋದಕ್ಕೆ ಮುಂದಾಗುತ್ತಿಲ್ಲ.ಕನ್ಯೆ ಕೊಡೋದಕ್ಕೆ ಅಂತ ಮುಂದೆ ಬಂದ್ರೂ ಕೂಡ ಈ ಊರಿನ ಅವಸ್ಥೆ ಕಂಡು ಹಿಂದೆ ಸರಿಯುತ್ತಿದ್ದಾರೆ.
ಹೌದು,ಇಂತಹ ಘಟನೆ ವರದಿಯಾಗಿದ್ದು, ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ 6ನೇ ಹೊಸಕೋಟೆ (Hosakote Village) ಗ್ರಾಮದಲ್ಲಿ. ಸುಮಾರು 100ಕ್ಕೂ ಅಧಿಕ ದಲಿತ ಕುಟುಂಬಗಳು ಇಲ್ಲಿ ವಾಸವಿದ್ದರೂ ಕೂಡ ಈ ಗ್ರಾಮಕ್ಕೆ ಸರಿಯಾದ ವ್ಯವಸ್ಥೆಗಳೇ ಇಲ್ಲವೆಂದು ಅಲ್ಲಿಯ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಸಂಪರ್ಕ ರಸ್ತೆಯ ಸ್ಥಿತಿ ಹೇಳತೀರದು, ಅಲ್ಲದೇ ಈ ಗ್ರಾಮಕ್ಕೆ ಕೊಡಗು ಜಿಲ್ಲಾ ಪಂಚಾಯ್ತಿ ವತಿಯಿಂದ ಮಿನಿ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಾಣ ಮಾಡಿ ಬಹಳ ಕಾಲ ಕಳೆದ್ರೂ ಇನ್ನೂ ಕೂಡ ಜನರಿಗೆ ಕುಡಿಯಲು ಯೋಗ್ಯ ನೀರು ಬಿಟ್ಟಿಲ್ಲ.ಕೆಲವೆಡೆ ಕಾಮಗಾರಿಯನ್ನು ಕೂಡ ಅರ್ಧಕ್ಕೆ ನಿಲ್ಲಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಇದೀಗ ಈ ಗ್ರಾಮದಲ್ಲಿ ಕುಡಿಯುವ ನೀರಿಗೂ ಜನ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರೇನೋ ಬರುತ್ತಿದೆ ಆದ್ರೆ ಚರಂಡಿ ಮಿಶ್ರಿತ ನೀರು ನಲ್ಲಿಗಳಲ್ಲಿ ಬರುತ್ತಿದ್ದು, ಹಲವಾರು ಜನ ಇದರಿಂದ ರೋಗ ಪೀಡಿತರಾಗಿದ್ದಾರೆ. ಹೀಗಾಗಿ ಈ ಊರಿಗೆ ಹೆಣ್ಣು ಕೊಡಲು ಬರುವವರು ಊರಿನ ಪರಿಸ್ಥಿತಿ ಕಂಡು ಬಂದ ದಾರಿಯಲ್ಲೇ ವಾಪಾಸ್ಸಾಗುತ್ತಿದ್ದಾರೆ.
ಇಲ್ಲಿ ಈ ಹಿಂದೆ ಕೊಳವೆ ಬಾವಿ ನಿರ್ಮಾಣವಾಗಿತ್ತು.ಆದರೆ ಕೊಳವೆ ಬಾವಿಗೆ ಅಳವಡಿಸಿರೋ ಮೋಟಾರ್ ಪಂಪನ್ನು ಇಲ್ಲಿನ ಗ್ರಾಮ ಪಂಚಾಯ್ತಿಯ ಸದಸ್ಯ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ಅಲ್ಲಲ್ಲೇ ಶೇಖರಣೆಯಾಗುತ್ತಿದ್ದು, ಮನೆಯ ಮುಂಭಾಗದಲ್ಲೇ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೆಂಗ್ಯೂ ಮಲೇರಿಯಾದಂತ ಕಾಯಿಲೆಗಳು ಬರುತ್ತಿದೆ.ಮಕ್ಕಳಲ್ಲಿ ಹಿರಿಯರಲ್ಲಿ ರೋಗಗಳು ಕಂಡು ಬರುತ್ತಿದ್ದು, ಅನೇಕ ರೋಗ ರುಜಿನಗಳಿಂದ 10-15 ಮಂದಿ ದಾರುಣವಾಗಿ ಅಂತ್ಯ ಕಂಡಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನ ವಿಚಾರಿಸಿದಾಗ ಅಂತಹ ಯಾವುದೇ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂಬ ಉತ್ತರವನ್ನು ನೀಡಿದ್ದಾರೆ ಎನ್ನಲಾಗಿದೆ.ಗ್ರಾಮಸ್ಥರು ಇದುವರೆಗೂ ತಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಅಂತ ಲಿಖಿತವಾಗಿ ದೂರು ನೀಡಿಲ್ಲ. ಜೆಜೆಎಂನಿಂದ ಕುಡಿಯುವ ನೀರಿನ ಟ್ಯಾಂಕ್ (Water Tank) ನಿರ್ಮಾಣ ಕಾರ್ಯ ಮುಗಿದಿದೆ. ಹಾಗೇನಾದ್ರೂ ಇದ್ರೆ ದೂರು ಕೊಡಲಿ ಅಂತಿದ್ದಾರೆ.ಒಟ್ಟಿನಲ್ಲಿ 6ನೇ ಹೊಸಕೋಟೆ ಗ್ರಾಮಕ್ಕೆ ಇನ್ನಾದ್ರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ಪರಿಹರಿಸಬೇಕಿದೆ.