ನ್ಯೂಸ್ ನಾಟೌಟ್ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ(DV Sadananda Gowda) ಚುನಾವಣಾ ರಾಜಕೀಯಕ್ಕೆ ಬುಧವಾರ(ನ.೮) ಹಾಸನದಲ್ಲಿ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಹೇಳಿದ್ದು, ಪ್ರಸ್ತುತ ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನಲಾಗಿದೆ. ರಾಜಕೀಯವಾಗಿ ಆ ವಿಚಾರವಾಗಿ ಅಸಮಾಧಾನಗೊಂಡಿದ್ದ ಅವರು, ಪಕ್ಷದ ವರಿಷ್ಠರು ತಮ್ಮ ನಿಲುವು ತಿಳಿಸಬೇಕು ಎಂದು ಆಗ್ರಹಿಸಿದ್ದರು.
2021ರಲ್ಲಿ ಕೇಂದ್ರ ಸಚಿವರ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಅವರು ಕೇಂದ್ರ ಸಚಿವ ಸ್ಥಾನ ತ್ಯಜಿಸಿದ್ದ ಘಟನೆ ನಡೆದಿತ್ತು. ಈ ನಿರ್ಧಾರದ ಹಿಂದೆಯೂ ಕೇಂದ್ರ ನಾಯಕರ ಒತ್ತಡವಿದೆಯಾ ಎಂಬ ಚರ್ಚೆಗಳು ಜೋರಾಗಿವೆ.
‘ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷಗಳ ಕಾಲ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಹೆಚ್ಚು ಆಸೆಪಟ್ಟರೆ, ಜನ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ’ ಎಂದು ಹೇಳಿದ್ದಾರೆ.
ರಾಜ್ಯ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಇದು ತಮಗೆ ಮುಜುಗರ ಉಂಟು ಮಾಡಿದೆ ಎಂದು ಒಪ್ಪಿಕೊಂಡರು ಎನ್ನಲಾಗಿದೆ.