ನ್ಯೂಸ್ ನಾಟೌಟ್: ಗಂಡ -ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನೋದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಗಂಡ ಕಂಠಪೂರ್ತಿಯಾಗಿ ಮದ್ಯ ಸೇವನೆ ಮಾಡಿ ಹೆಂಡತಿಯ ತಲೆಗೆ ಕೊಡಲಿಯಿಂದ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.
ಕುಡಿತದ ವಿಚಾರಕ್ಕೆ ಸಂಬಂಧ ಪಟ್ಟಂತೆ ಗಂಡ ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಇದು ತಾರಕಕ್ಕೆ ಹೋಗಿದೆ. ಈ ಹಂತದಲ್ಲಿ ಗಂಡ ಕೊಡಲಿ ತಂದು ಅದರಲ್ಲಿ ಪತ್ನಿಯ ತಲೆಗೆ ಹೊಡೆಯುತ್ತಾನೆ.
ಪತ್ನಿಯ ತಲೆಯಲ್ಲಿ ರಕ್ತ ಒಸರುತ್ತಿದ್ದರೂ ಆಕೆಯನ್ನು ದಯೆ ತೋರಿಸದೆ ಕತ್ತಲ ರಾತ್ರಿಯೇ ಮನೆಯಿಂದ ಹೊರಕ್ಕೆ ಹಾಕಿ ಬಾಗಿಲು ಹಾಕಿ ಮಲಗುತ್ತಾನೆ. ಮರುದಿನ ಬೆಳಗ್ಗೆ ಎಲ್ಲವೂ ಬಿರಿದಿರುತ್ತದೆ. ಹಾಗೆ ಬಾಗಿಲು ಚಿಲಕ ತೆಗೆದು ನೋಡಿದಾಗ ಹೆಂಡತಿಯ ಶವ ಅಂಗಳದಲ್ಲಿ ಬಿದ್ದಿರುತ್ತದೆ.
ಪದ್ಮಾಕ್ಷಿ 40 ವರ್ಷ ಮೃತಪಟ್ಟ ಮಹಿಳೆ, ಮೃತಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮನೆಯಲ್ಲಿ ಯಾರೂ ಇರಲಿಲ್ಲ. ಗೋಣಿಬೀಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.