ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಕೋತಿಗಳು ಹಣ್ಣುಗಳನ್ನು ಕಂಡಾಗ ಎಲ್ಲಿದ್ರೂ ಬಿಡೋದಿಲ್ಲ.ಹಣ್ಣುಗಳನ್ನು ಕಂಡ್ರೆ ಸಾಕು ಯಾರದ್ದೇ ತೋಟ ಆಗಿರಲಿ ಹೇಗಾದರೂ ಜಂಪ್ ಮಾಡಿ ಹಣ್ಣುಗಳನ್ನು ತಿಂದು ಬಿಡುತ್ತವೆ. ಆದರೆ ಇಲ್ಲೊಂದು ಕಪಿರಾಯನನ್ನು ಕಂಡ್ರೆ ನಿಮ್ಗೂ ಆಶ್ಚರ್ಯವಾಗದಿರಲ್ಲ..
ಈ ಕೋತಿ ಕೆಲಸ ಮಾಡ್ತಾ ಇರೋದು ಸರ್ಕಾರಿ ಕಚೇರಿಯಲ್ಲಿ. ಕೆಲಸದ ವಿಷಯದಲ್ಲಿ ತುಂಬಾ ಶಿಸ್ತು. ಕಡತಗಳನ್ನೆಲ್ಲ ಬೇಗ ಬೇಗ ಪರಿಶೀಲಿಸುತ್ತೆ. ಅದರಲ್ಲೂ ಕೆಲಸದ ಮಧ್ಯೆ ಒಡ್ಡುವ ಆಮಿಷ ಯಾವುದೂ ಅದರ ಗಮನಕ್ಕೇ ಬರುವುದಿಲ್ಲ. ಹೌದು, ಈ ಆಫೀಸರ್ ಮಂಗನ ವಿಡಿಯೋ ಎಲ್ಲೆಡೆ ವೈರಲ್ (Viral Video) ಆಗಿದೆ.
ಈ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ.ಮನುಷ್ಯರು ಯಾವ ರೀತಿ ಕೆಲಸ ಮಾಡುತ್ತಾರೋ ಅದೇ ರೀತಿ ಈ ಮಂಗನ ವರ್ತನೆಯೂ ಇದೆ. ಉತ್ತರ ಪ್ರದೇಶದ ಸಹರಾನ್ಪುರದ ಸರ್ಕಾರಿ ಕಚೇರಿಯೊಂದರಲ್ಲಿ ಈ ಘಟನೆ ನಡೆದಿದೆ. ಕಚೇರಿ ಒಳಗೆ ಬಂದ ಮಂಗ ಕುತೂಹಲದ ಜತೆಗೆ ಅಷ್ಟೇ ತನ್ಮಯತೆಯಿಂದ ಫೈಲ್ ಒಳಗಿರುವ ಪೇಪರ್ಗಳನ್ನು ಪರಿಶೀಲಿಸುತ್ತದೆ. ಒಂದಾದ ಬಳಿಕ ಇನ್ನೊಂದು ತೆಗೆದು ನಾಜೂಕಾಗಿ ಪುಟ ತಿರುಗಿಸುತ್ತದೆ. ಸುತ್ತಲೂ ಇರುವ ಜನರು ಅಚ್ಚರಿಯಿಂದ ಇದನ್ನೇ ಗಮನಿಸುತ್ತಾರೆ.
ವಿಡಿಯೋ ಗಮನಿಸಿದ್ರೆ ವ್ಯಕ್ತಿಯೊಬ್ಬ ಬಾಳೆಹಣ್ಣನ್ನು ಆ ಕೋತಿಯ ಎದುರು ಇಡುತ್ತಾನೆ. ಆದರೆ ಆ ಬಾಳೆಹಣ್ಣಿಗೂ ಕೋತಿ ಕ್ಯಾರೇ ಮಾಡೋದಿಲ್ಲ.ಕರ್ತವ್ಯವೇ ಮುಖ್ಯ ಎಂದು ಭಾವಿಸಿದ ಆ ಮಂಗ ಅದರತ್ತ ಕಣ್ಣೆತ್ತಿಯೂ ನೋಡೋದಿಲ್ಲ. ಕಡತ ಗಮನಿಸುವುದರಲ್ಲಿ ನಿರತವಾಗಿರುವ ಕೋತಿಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಈ ಅಪರೂಪದ ಕೋತಿಯನ್ನು ಕಂಡು ಹಲವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಸಹರಾನ್ಪುರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ADM) ದೀಪಕ್ ಕುಮಾರ್ ಈ ವಿಡಿಯೊ ಕುರಿತು ಸ್ಪಷ್ಟನೆ ನೀಡಿ, “ಕೋತಿ ಬೆಹತ್ ತಹಸಿಲ್ ಪ್ರದೇಶದ ವಕೀಲರ ಕೊಠಡಿಗೆ ಪ್ರವೇಶಿಸಿ ಮೇಜಿನ ಮೇಲೆ ಕುಳಿತಿತ್ತು” ಎಂದು ಹೇಳಿದ್ದಾರೆ. ʼʼಈ ಪ್ರದೇಶದಲ್ಲಿ ಕೋತಿಗಳು ಆಗಾಗ್ಗೆ ಕಂಡುಬರುವುದು ಸಾಮಾನ್ಯ ಎಂಬಂತಾಗಿದೆ. ಈ ಕೋತಿ ಕಚೇರಿಗೆ ಪ್ರವೇಶಿಸಿದ ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಅಧಿಕೃತರು ಮಾಹಿತಿ ನೀಡಿದ್ದಾರೆʼʼ ಎಂದೂ ದೀಪಕ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಬೋಲ್ಪುರದ ರೈಲ್ವೆ ನಿಲ್ದಾಣದ ವಿಚಾರಣಾ ಕಚೇರಿಯಲ್ಲಿ ಬೂದು ಬಣ್ಣದ ಲಂಗೂರ್ ಕಂಪ್ಯೂಟರ್ ಮುಂದೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಅದು ಕಂಪ್ಯೂಟರ್ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವಂತೆ ವರ್ತಿಸುತ್ತಿದ್ದುದು ವಿಡಿಯೊದಲ್ಲಿ ಸೆರೆಯಾಗಿತ್ತು.ಒಟ್ಟಿನಲ್ಲಿ ಕೋತಿಗಳ ಈ ಫನ್ನಿ ವಿಡಿಯೊಗಳು ಹಲವರಿಗೆ ಮಜಾ ನೀಡುತ್ತವೆ.