ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ದುಬಾರಿ ಬೆಲೆಗೆ ಟ್ವಿಟ್ಟರ್ ಖರೀದಿಸಿ ಅದನ್ನೀಗ ಎಕ್ಸ್ ಎಂದು ಬದಲಾಯಿಸಿರುವ ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸ್ಥಾಪಕ ಮತ್ತು ಜಗತ್ತಿನ ನಂ. 1 ಶ್ರೀಮಂತ ಎಲಾನ್ ಮಸ್ಕ್, ಈಗ ವಿಕಿಪೀಡಿಯಾಕ್ಕೆ 1 ಬಿಲಿಯನ್ ಡಾಲರ್ (ಸುಮಾರು 8,000 ಕೋಟಿ ರೂ.) ಕೊಡುವುದಾಗಿ ಘೋಷಿಸಿಕೊಂಡಿದ್ದಾರೆ.
ಆದರೆ, ಇದಕ್ಕೆ ಕೆಲವು ಷರತ್ತುಗಳಿವೆ ಎಂದಿದ್ದು, ಕೋವಿಡ್ ಬಳಿಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ, “ವಿಕಿಪೀಡಿಯಾ ತನ್ನ ಹೆಸರನ್ನು ‘ಡಿಕಿಪೀಡಿಯಾ’ ಎಂದು ಬದಲಾಯಿಸಿಕೊಂಡರೇ, ನಾನು ಒಂದು ಬಿಲಿಯನ್ ಡಾಲರ್ ನೀಡುತ್ತೇನೆ,” ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಎಕ್ಸ್ ಬಳಕೆದಾರರೊಬ್ಬರು, “ತಕ್ಷಣವೇ ಹೆಸರು ಬದಲಿಸಿ, ನೀವು ಹಣ ನೀಡಿದ ಬಳಿಕ ಮತ್ತೆ ಹಳೆಯ ಹೆಸರನ್ನೇ ಇಟ್ಟರೇ ಏನು ಮಾಡುವಿರಿ?” ಎಂದು ಪ್ರಶ್ನಿಸಿದ್ದರು. ಕೂಡಲೇ ಉತ್ತರ ನೀಡಿದ ಎಲಾನ್ ಮಸ್ಕ್, “ಕನಿಷ್ಠ ಒಂದು ವರ್ಷ ಡಿಕಿಪೀಡಿಯಾ ಹೆಸರನ್ನೇ ಮುಂದುವರಿಸಬೇಕು. ಈ ಷರತ್ತು ಪಾಲಿಸಿದರೆ, ನಾನು ಹಣ ನೀಡುವೆ. ನಾನು ಮೂರ್ಖನಲ್ಲ,” ಎಂದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಎಲಾನ್ ಮಸ್ಕ್ ವಿಕಿಪೀಡಿಯಾದ ಮುಖಪುಟದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ವಿಕಿಪೀಡಿಯಾ ಮಾರಾಟಕ್ಕಿಲ್ಲ,” ಮತ್ತು “ಜಿಮ್ಮಿ ವೇಲ್ಸ್ನಿಂದ ವೈಯಕ್ತಿಕ ಮನವಿ,” ಎನ್ನುವ ಪಠ್ಯವಿದೆ. ಈ ಅಂಶ ಪ್ರಸ್ತಾಪಿಸಿರುವ ಎಲಾನ್ ಮಸ್ಕ್, “ವಿಕಿಮೀಡಿಯಾ ಫೌಂಡೇಶನ್ ಏಕೆ ಹೆಚ್ಚು ಹಣವನ್ನು ಬಯಸುತ್ತಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಕಿಪೀಡಿಯಾಗೆ ಖರ್ಚುಗಳೇ ಇಲ್ಲ. ನಿಮ್ಮ ಫೋನ್ನಲ್ಲಿಯೇ ನೀವು ಸಂಪೂರ್ಣ ಲೇಖನವನ್ನು ವಿಕಿಪೀಡಿಯಾದಲ್ಲಿ ಪ್ರಕಟಿಸಬಹುದು. ಹಾಗಾದರೆ, ಹಣ ಯಾವುದಕ್ಕಾಗಿ? ಈ ಬಗ್ಗೆ ತಿಳಿಯಲು ಬಯಸುತ್ತೇನೆ,” ಎಂದು ತಮ್ಮದೇ ಮಾಲಿಕತ್ವದ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
“ವಿಕಿಪೀಡಿಯಾ ಪುಟದಲ್ಲಿ ಹಸು ಮತ್ತು ಸೆಗಣಿಯ ಎಮೋಜಿಯನ್ನು ಸೇರಿಸಬಹುದೇ?” ಎಂದು ಎಲಾನ್ ಮಸ್ಕ್ ಅವರು ಮತ್ತೊಂದು ಟ್ವೀಟ್ನಲ್ಲಿ ಅಣಕವಾಡಿದ್ದಾರೆ. ವಿಕಿಪೀಡಿಯಾ ಮತ್ತು ಎಲಾನ್ ಮಸ್ಕ್ ನೇತೃತ್ವದ ಎಕ್ಸ್ (ಟ್ವಿಟರ್) ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಈ ವರ್ಷದ ಮೇನಲ್ಲಿ ವಿಕಿಪೀಡಿಯಾದ ಸಂಸ್ಥಾಪಕ ಜಿಮ್ಮಿ ವೇಲ್ಸ್ , ಟರ್ಕಿ ಅಧ್ಯಕ್ಷೀಯ ಚುನಾವಣೆಗೂ ಒಂದು ದಿನ ಮೊದಲು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರ ಟೀಕಾಕಾರರ ಪ್ರತಿಕ್ರಿಯೆಯನ್ನು ಟ್ವಿಟ್ಟರ್ನಿಂದ ತೆಗೆದು ಹಾಕಿದ್ದಕ್ಕೆ ಎಲಾನ್ ಮಸ್ಕ್ ನನ್ನು ಟೀಕಿಸಿದ್ದರು ಇದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಲನ್ ಮಸ್ಕ್ ಎಂಬ ಚರ್ಚೆ ಜೋರಾಗಿದೆ.