ನ್ಯೂಸ್ ನಾಟೌಟ್ : ಹುಲಿ ಉಗುರು ಪ್ರಕರಣದಲ್ಲಿ ನೋಟೀಸ್ ಪಡೆದಿದ್ದ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಈಗ ಕೋರ್ಟ್ ರಿಲೀಫ್ ನೀಡಿದೆ. ಅರಣ್ಯ ಇಲಾಖೆ ನೀಡಿದ್ದ ನೋಟೀಸ್ಗೆ ಹೈಕೋರ್ಟ್ ತಡೆ ನೀಡಿದ್ದು, ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಅವರಿಗೆ ಯಾವುದೇ ನೋಟಿಸ್ ನೀಡದೇ, ನೇರವಾಗಿ ಅವರ ಮನೆಗೆ ತೆರಳಿ ಶೋಧ ಕಾರ್ಯ ನಡೆಸಿದ ಅರಣ್ಯ ಅಧಿಕಾರಿಗಳ ವೈಖರಿಯನ್ನು ಕೋರ್ಟ್ ತೀವ್ರವಾಗಿ ಟೀಕಿಸಿದೆ.
ಬಿಗ್ಬಾಸ್ನಲ್ಲಿ ಹುಲಿ ಉಗುರು ಹಾಕಿ ಪೊಲೀಸರ ಅತಿಥಿಯಾಗಿದ್ದ ವರ್ತೂರು ಸಂತೋಷ್, ಒಂದಷ್ಟು ದಿನ ಜೈಲಿನಲ್ಲೂ ಕಾಲ ಕಳೆದು, ಅದಾದ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದರು. ಇವರ ಬಂಧನದ ಬಳಿಕ ಸಿನಿಮಾ ಮಂದಿಯ ಮತ್ತು ರಾಜಕೀಯ ಗಣ್ಯರ ಹೆಸರೂ ಹುಲಿ ಉಗುರು ಕೇಸ್ನಲ್ಲಿ ತಳುಕು ಹಾಕಿಕೊಂಡಿತ್ತು.
ಅದರಂತೆ, ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರ್ ಸೇರಿ ಹಲವು ನಟರ ಮನೆಗೆ ತೆರಳಿದ ಅರಣ್ಯಾಧಿಕಾರಿಗಳು ನಟರಿಂದ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದರು. ಆ ಪೈಕಿ ನೋಟಿಸ್ಗೆ ಉತ್ತರ ನೀಡುವ ಮುನ್ನವೇ ಅರಣ್ಯಾಧಿಕಾರಿಗಳು ರೈಡ್ ಮಾಡಿದ್ದರು. ಇದನ್ನು ಪ್ರಶ್ನಿಸಿ ನೋಟಿಸ್ಗೆ ತಡೆ ನೀಡಬೇಕೆಂದು ಜಗ್ಗೇಶ್ ಅವರು ಕೋರ್ಟ್ ಮೊರೆ ಹೋಗಿದ್ದರು. ಜಗ್ಗೇಶ್ ಪರ ವಕೀಲ ಪ್ರಭುಲಿಂಗ ನಾವದಗಿ, ಜಡ್ಜ್ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಎದುರು ತಮ್ಮ ವಾದ ಮಂಡಿಸಿದರು. ವಾದ ಆಲಿಸಿದ ಪೀಠ ಅರಣ್ಯಾಧಿಕಾರಿಗಳ ನೋಟಿಸ್ಗೆ ತಡೆ ನೀಡಿದೆ.
ಜಗ್ಗೇಶ್ ಕಳೆದ 40 ವರ್ಷಗಳಿಂದ ಕೊರಳಲ್ಲಿ ಧರಿಸಿರುವುದು ನಿಜವಾದ ಹುಲಿ ಉಗುರು ಎಂದು ಸ್ವತಃ ಜಗ್ಗೇಶ್ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು. ಅದರ ಆಧಾರದ ಮೇಲೆಯೇ ಅವರಿಗೂ ನೋಟೀಸ್ ನೀಡಿ, ಮನೆಯಲ್ಲಿನ ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿತ್ತು.
ಜಗ್ಗೇಶ್ ಗೆ ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಶೋಧ ಏಕೆ ನಡೆಸಿದಿರಿ? ನೋಟಿಸ್ಗೆ ಪ್ರತಿಕ್ರಿಯೆ ಪಡೆದ ಮೇಲೆ ದಾಳಿ ನಡೆಸಬೇಕಲ್ಲವೇ? ಇದು ನಿಯಮಬಾಹಿರವಲ್ಲವೇ? ಎಂದು ಕೋರ್ಟ್ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದೆ.
ಇನ್ನು ಈ ಬಗ್ಗೆ ಬೇಸರ ಹೊರಹಾಕಿದ ಜಗ್ಗೇಶ್, “ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು! ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನು ಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಭಂಧನ ಹಾಕಿಕೊಂಡಿತು ಮನಸ್ಸು. ಇಂದಿನ ದುರ್ದೈವ ಪ್ರಚಾರ ಕಂಡು! ಸಂಬಂಧ ಅರಿವಿಲ್ಲದ ಸಮುದಾಯ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.