- +91 73497 60202
- [email protected]
- November 22, 2024 8:02 PM
ಸಾರ್ವಜನಿಕರ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ ನೀಡಲು ರಾಜ್ಯದ ಸರಕಾರ ತೀರ್ಮಾನಿಸಿದೆ. ಈ ಮೂಲಕ ಹುಲಿ ಉಗುರುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವರದಿ ತಿಳಿಸಿದೆ. ಅಕ್ರಮವಾಗಿ ವನ್ಯಜೀವಿಗಳಿಂದ ಉತ್ಪಾದಿತ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವವರಿಗೆ ಕೊನೆಯ ಅವಕಾಶ ನೀಡಲು ತೀರ್ಮಾನಿಸಿದ್ದು, ಪ್ರಾಣಿಗಳ ಚರ್ಮ, ಉಗುರು, ಕೊಂಬು ಸೇರಿದಂತೆ ವನ್ಯಜೀವಿಗೆ ಸಂಬಂಧಿಸಿ ಯಾವುದೇ ವಸ್ತುಗಳು ಮನೆಯಲ್ಲಿದ್ದರೆ ವಸ್ತು ವಾಪಸ್ ಕೊಡಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅಭಿಪ್ರಾಯ ನೀಡಲು ಅಡ್ವೋಕೆಟ್ ಜನರಲ್ ಅವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಂಬಂಧ ಪತ್ರ ಬರೆದಿದ್ದಾರೆ. ಕಾಲವಕಾಶ ನೀಡುವ ಸಂಬಂಧ ಎಜಿ ಅಭಿಪ್ರಾಯದ ಬಳಿಕ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ 2 ತಿಂಗಳ ಕಾಲಾವಕಾಶದೊಳಗೆ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸದಿದ್ರೆ ಮೊಕದ್ದಮೆ ದಾಖಲಾಗಲಿದೆ. ಕಾಲಾವಕಾಶ ನೀಡಲು ಸಿಎಂ ಸಿದ್ದರಾಮಯ್ಯ ಕೂಡ ಸಹಮತ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲು ಅರಣ್ಯ ಇಲಾಖೆ ತಿರ್ಮಾನ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟ ಷರತ್ತುಗಳ ಬಗ್ಗೆ ಅಧಿಕೃತ ಆದೇಶ ಬಂದ ಮೇಲೆ ತೀರ್ಮಾಣಿಸಲಾಗುವುದು ಎನ್ನಲಾಗಿದೆ. ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣಕ್ಕಾಗಿ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವರ್ತೂರ್ ಅವರನ್ನು ಬಂಧಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ವರ್ತೂರು ಸಂತೋಷ್ ಗೆ ಇದೀಗ ಜಾಮೀನು ಮಂಜೂರಾಗಿದೆ. 2ನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ನೀಡಿದ್ದು, ನ್ಯಾಯಾಧೀಶರಾದ ನರೇಂದ್ರ ಅವರಿಂದ ಆದೇಶ ಹೊರಬಿದ್ದಿದೆ. ಸದ್ಯ ವರ್ತೂರ್ ಸಂತೋಷ್ ಅವರಿಗೆ ರಿಲೀಫ್ ಸಿಕ್ಕಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ