ನ್ಯೂಸ್ ನಾಟೌಟ್: ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅಕ್ಟೋಬರ್ 25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ, ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ – ಧರ್ಮ – ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ. ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. ಮಂಗಳೂರು ದಸರಾದಲ್ಲಿ ಪ್ರತಿ ಒಂದೊಂದು ವಿಶೇಷವಿರುತ್ತದೆ ಎಂದು ತಿಳಿಸಿದ್ದಾರೆ.