ನ್ಯೂಸ್ ನಾಟೌಟ್ : ಕೆಲವೊಂದು ಪ್ರಭೇದದ ಹಾವುಗಳ ಸಂತತಿ ನಶಿಸುತ್ತಿದೆ.ಆದರೂ ಕೆಲವು ಅಪರೂಪದ ಹಾವುಗಳು ಕಣ್ಣಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತದೆ.
ಇಂತಹ ಅಪರೂಪದ ಘಟನೆಗೆ ಚಿಕ್ಕಮಗಳೂರು ಜಿಲ್ಲೆ ಸಾಕ್ಷಿಯಾಗಿದೆ.ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವು ಇದೀಗ ಸೆರೆಯಾಗಿದೆ.ಕಾಫಿನಾಡಿನ ಕಳಸದಲ್ಲಿ ಈ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು ಕಾಣಸಿಕ್ಕಿದ್ದು ಅದನ್ನು ಸೆರೆ ಹಿಡಿಯಲಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಉರಗವು ಹಲವು ವಿಶೇಷತೆಗಳನ್ನು ಒಳಗೊಂಡಿದೆ.ಅವುಗಳಲ್ಲಿ ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಗುಣವನ್ನು ಇದು ಹೊಂದಿದೆ ಎಂದರೆ ಅಚ್ಚರಿ ಪಡಬೇಕಾದ ವಿಚಾರ.ಹೀಗಾಗಿ ಈ ಅಪರೂಪದ ಹಾವನ್ನು ವೀಕ್ಷಿಸಲೆಂದು ಜನ ಸುತ್ತಲೂ ನೆರೆದಿದ್ದರು.ಕೆಲವರು ಇದರ ಫೋಟೋವನ್ನು ಕ್ಲಿಕ್ಕಿಸಿಕೊಂಡರೆ ಮತ್ತೂ ಕೆಲವರು ವಿಡಿಯೋಗಾಗಿ ಮುಗಿಬಿದ್ದರು.
ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಈ ಹಾವು ಸೆರೆಯಾಗಿದೆ.ದೇವಸ್ಥಾನದ ಪಕ್ಕದ ಚಂದ್ರು ಭಟ್ ಮನೆಯ ಅಂಗಳದಲ್ಲಿ ಈ ಬ್ಯಾಂಬೋ ಪಿಟ್ ವೈಫರ್ ಹಾವು ಒಂದು ಗಿಡದ ಎಲೆಗಳ ಮಧ್ಯೆ ಕಾಣಿಸಿಕೊಂಡಿದೆ.ಇದು ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಾಗಿರುತ್ತದೆ ಎಂದು ಹೇಳಲಾಗಿದೆ.
ಇನ್ನೊಂದು ವಿಶೇಷವೆಂದ್ರೆ ಈ ಹಾವು ಕಡಿದರೆ ಸಾಯುವುದಿಲ್ಲ, ಬದಲಾಗಿ ಅವರು ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಎಂದು ಹೇಳಲಾಗಿದೆ.ಹೀಗಾಗಿ ಈ ಅಪರೂಪದ ಹಾವಿನ ಸೌಂದರ್ಯ ನೋಡಿ ಸ್ಥಳಿಯರು ಸಕತ್ ಖುಷಿ ಪಟ್ಟರು.ಇದಾದ ಬಳಿಕ ಹಾವನ್ನು ನಾಜೂಕಿನಿಂದ ಹಿಡಿಯಲಾಯಿತು. ಅಪರೂಪದ ಹಾವನ್ನ ರಿಜ್ವಾನ್ ಅವರು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.