ನ್ಯೂಸ್ ನಾಟೌಟ್: ಸುಳ್ಯದ ಹಳೆಗೇಟು ಎಂಬಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಹೆಬ್ಬಾವು ಹಾಗೂ ಅದರ ಮರಿ ಪ್ರತ್ಯಕ್ಷವಾಗಿರುವುದರ ಬಗ್ಗೆ ವರದಿಯಾಗಿತ್ತು.ರಾತ್ರಿ ವೇಳೆ ಮನೆಯೊಂದರ ನಾಯಿ ಗೂಡು ಬಳಿ ಬಂದಿದ್ದ ಹೆಬ್ಬಾವು ಬಳಿಕ ಕಣ್ಮರೆಯಾಗಿತ್ತು ಎಂದು ಮಹಿಳೆಯೊಬ್ಬರು ಮಾಹಿತಿ ನೀಡಿದ್ದರು.ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು,ಸ್ಥಳೀಯ ಯುವಕರು ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ವರದಿಯಾಗಿದೆ.
ಹಳೆಗೇಟು ಬಳಿ ರಸ್ತೆ ಬದಿಯಲ್ಲಿ ಕಾಣಿಕೊಂಡ ಬೃಹದಾಕಾರದ ಹೆಬ್ಬಾವನ್ನು ಯುವಕರು ನಾಜೂಕಾಗಿ ಹಿಡಿದು ಕಾಡಿಗೆ ಬಿಟ್ಟ ಘಟನೆ ನಡೆದಿದೆ.ಹಳೆಗೇಟು ಸತೀಶ್ ಭಟ್ ರವರ ಮನೆಯ ಮುಂಭಾಗ ಬಂದಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವು ರಸ್ತೆ ಬದಿಯಲ್ಲಿರುವುದನ್ನು ಕಂಡ ಯುವಕರ ತಂಡ ಕೂಡಲೇ ಕಾರ್ಯಪ್ರವೃತ್ತರಾದರು.
ಬಳಿಕ ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಸ್ಥಳೀಯ ಯುವಕರಾದ ಆರಿಸ್, ಅಶ್ರಫ್, ರಶೀದ್, ಸಚಿನ್ ಸೇರಿದಂತೆ ಇನ್ನಿತರ ಯುವಕರು ಹಾವನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಈ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದೀಗ ಅಪರೂಪಕ್ಕೊಮ್ಮೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ಹೇರಳವಾಗಿವೆ. ದಾರಿ ಬದಿಗಳಲ್ಲಿ ವಿಪರೀತ ಪೊದೆಗಳಿದ್ದರೆ ಯಾವುದೇ ಹಾವುಗಳು ಇರುವ ಸಾಧ್ಯತೆ ಇರೋದ್ರಿಂದ ಮಕ್ಕಳು ,ಸಾರ್ವಜನಿಕರು ತುಸು ಎಚ್ಚರಿಕೆಯಿಂದ ಓಡಾಡುವುದು ಒಳಿತು ಅನ್ನೋದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.