ನ್ಯೂಸ್ ನಾಟೌಟ್ : ಸುಳ್ಯದ ಹಲವು ಕಡೆ ಹುಚ್ಚು ನಾಯಿ ಹಾಗೂ ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ. ಈ ಹಿಂದೆ ಆಟವಾಡಿಕೊಂಡಿದ್ದ ಸಣ್ಣ ಮಗುವಿನ ಮೇಲೆ ಬೀದಿ ನಾಯಿಯೊಂದು ಎರಗಿ ಬಿದ್ದು ಮಗುವನ್ನು ಗಾಯಗೊಳಿಸಿತ್ತು.ಇದರ ಬೆನ್ನಲ್ಲೇ ಇದೀಗ ಮತ್ತೆ ಸುಳ್ಯ ಪರಿಸರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ.
ಸುಳ್ಯ ಪರಿಸರ ಅದರಲ್ಲೂ ಕೇರ್ಪಳ ಬೂಡು ಪ್ರದೇಶದಲ್ಲಿ ಸುಮಾರು ೨೦ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಈ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ.ಚಿಕ್ಕ ಮಕ್ಕಳಂತು ಬೀದಿ ಬದಿಯಲ್ಲಿ ಓಡಾಡುವ ಹಾಗಿಲ್ಲ.ಶಾಲಾ ಮಕ್ಕಳು ಸೇರಿದಂತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳು , ವಾಹನ ಸವಾರರು ಬಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪುಟ್ಟ ಮಕ್ಕಳನ್ನು ರಸ್ತೆ ಬದಿಯಲ್ಲಿ ಅವರ ಪಾಡಿಗೆ ಬಿಡದೇ ಪೋಷಕರು ಜಾಗರೂಕತೆಯಿಂದ ಇರುವುದೇ ಒಳಿತು. ೨೦ಕ್ಕೂ ಅಧಿಕ ಬೀದಿ ನಾಯಿಗಳಿರುವುದರಿಂದ ಮಕ್ಕಳ ಮೇಲೆ ನಿಗಾ ಇರಿಸಲೇ ಬೇಕಾಗಿದೆ.ಬೀದಿ ನಾಯಿಗಳು ಮಲಗಿರುವಾಗ,ತಿನ್ನುತ್ತಿರುವಾಗ ಆದಷ್ಟು ತೊಂದರೆ ಮಾಡದ ಹಾಗೆ ನಿಮ್ಮ ಮಕ್ಕಳಿಗೆ ಮನವರಿಕೆ ಮಾಡಿದರೆ ಅವುಗಳು ಅವುಗಳ ಪಾಡಿಗಿರುವ ಸಾಧ್ಯತೆ ಹೆಚ್ಚಿದೆ.
ಈ ನಿಟ್ಟಿನಲ್ಲಿ ಈ ಪರಿಸರದಲ್ಲಿ ನಿತ್ಯ ಭಯದ ವಾತಾವರಣ ನಿರ್ಮಾಣವಾಗಿದ್ದು,ಶಾಲಾ ಮಕ್ಕಳನ್ನು ನಿತ್ಯ ಆತಂಕದಲ್ಲಿಯೇ ಶಾಲೆಗೆ ಕಳುಹಿಸಬೇಕಾದ ಪರಿಸ್ಥಿತಿ ಬಂದಿದೆ.ಬೀದಿನಾಯಿಗಳು ಯಾವಾಗ ಬಂದು ಎರಗುತ್ತವೆಯೋ ಎನ್ನುವ ಚಿಂತೆ ಕಾಡುತ್ತಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.