ನ್ಯೂಸ್ ನಾಟೌಟ್ :ಶಿಕ್ಷಕಿ ಕಡಿಮೆ ಅಂಕ ನೀಡಿದ್ದಾರೆಂದು 6ನೇ ಕ್ಲಾಸ್ ವಿದ್ಯಾರ್ಥಿನಿಯರು ಶಿಕ್ಷಕಿಯ ವಾಟರ್ ಬಾಟಲ್ಗೆ ಅವಧಿ ಮೀರಿದ ಮಾತ್ರೆ ಹಾಕಿದ ಘಟನೆ ಮಂಗಳೂರಿನಿಂದ ವರದಿಯಾಗಿದೆ.ಮಂಗಳೂರಿನ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು ಬೆಚ್ಚಿ ಬೀಳಿಸುವಂತಿದೆ.
ಶಿಕ್ಷಕಿ ಗಣಿತ ವಿಷಯದಲ್ಲಿ ಒಂದು ಅಂಕ ಕಡಿಮೆ ಕೊಟ್ಟಿದ್ದಾರೆಂದು ಈ ನಿರ್ಧಾರವನ್ನು ವಿದ್ಯಾರ್ಥಿನಿಯರು ಮಾಡಿದ್ದಾರೆ ಎನ್ನಲಾಗಿದೆ.ಸರಿ ಉತ್ತರಕ್ಕೂ ಮಾರ್ಕ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ವಿದ್ಯಾರ್ಥಿನಿಯರು ಎಕ್ಸ್ಪೈರ್ ಆದ ಮಾತ್ರೆಗಳನ್ನು ಶಿಕ್ಷಕಿ ನೀರು ಕುಡಿಯುವ ಬಾಟಲಿಗೆ ಹಾಕಿದ್ದಾರೆ ಎನ್ನಲಾಗಿದೆ.
ಈ ನೀರನ್ನು ಗಣಿತ ಶಿಕ್ಷಕಿ ಮತ್ತು ಸಹ ಶಿಕ್ಷಕಿ ನೀರು ಸೇವಿಸಿದ್ದಾರೆ.ಘಟನೆಯಿಂದಾಗಿ ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು,ಮತ್ತೋರ್ವ ಶಿಕ್ಷಕಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇದ್ದಕ್ಕಿದ್ದ ಹಾಗೆ ಶಿಕ್ಷಕಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂದು ಸಿಸಿಟಿವಿ ಪರಿಶೀಲಿಸಿದಾಗ,ಅಸಲಿ ಸತ್ಯ ಗೊತ್ತಾಗಿದೆ.6 ನೇ ತರಗತಿ ವಿದ್ಯಾರ್ಥಿನಿಯರು ನೀರಿನ ಬಾಟಲಿಗೆ ಮಾತ್ರೆ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ದೃಶ್ಯ ಆಧರಿಸಿ ಈ ಘಟನೆಯಿಂದಲೇ ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆಂದು ಪತ್ತೆ ಮಾಡಿದ್ದಾರೆ.