ನ್ಯೂಸ್ ನಾಟೌಟ್: ಕೆರೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ದೇಹ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡವಾರಪಲ್ಲಿ ಎಂಬಲ್ಲಿ ಇಂದು(ಅ.1) ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಈರೇನಹಳ್ಳಿ ಗ್ರಾಮದ ನಿವಾಸಿ ಶಂಕರ್ ಹಾಗೂ ನಾಗಮ್ಮ ದಂಪತಿಯ ಪುತ್ರಿ ಎಂದು ಗುರುತಿಸಲಾಗಿದೆ.
ನಯನ (15) ವಿದ್ಯಾರ್ಥಿನಿ ನಿಗೂಢವಾಗಿ ಕೊನೆಯುಸಿರೆಳೆದಿದ್ದು, ಶನಿವಾರ ಗ್ರಾಮದಿಂದ ಚಿಕ್ಕಬಳ್ಳಾಪುರದ ಖಾಸಗಿ ಶಾಲೆಗೆ ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲ. ಬದಲಾಗಿ ಚಿಕ್ಕಬಳ್ಳಾಪುರ ನಗರದಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಬಾಗೇಪಲ್ಲಿಗೆ ತೆರಳಿ ಅಲ್ಲಿಂದ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡ್ರವಾರಪಲ್ಲಿ ಕೆರೆ ಬಳಿ ಹೋಗಿದ್ದಾಳೆಎಂದು ವರದಿ ತಿಳಿಸಿದೆ.
ಕೆರೆಯ ದಡದಲ್ಲಿ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆಯಾಗಿದ್ದು ಕೆರೆಯಲ್ಲಿ ವಿದ್ಯಾರ್ಥಿನಿ ದೇಹ ನೀರಿನಲ್ಲಿ ತೇಲಿ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಕುರಿಗಾಹಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಬ್ಯಾಗ್ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿಯ ವಿಳಾಸ ತಿಳಿದುಬಂದಿದೆ. ಬಳಿಕ ಪೋಷಕರು ಹಾಗೂ ಶಾಲೆಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ದೇಹವನ್ನು ಬಾಗೇಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿನಿಯ ದುರಂತ ಅಂತ್ಯದ ಹಿಂದಿನ ಕಾರಣ ಇನ್ನೂ ಖಚಿತವಾಗಿಲ್ಲ. ಆಕೆಯ ಪೋಷಕರು ಸಹ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.